ಸಿನಿವಾಣಿ

ತಡರಾತ್ರಿ 2 ಗಂಟೆಗೆ ಜಿಮ್​, ಬೆಳಗ್ಗೆ 5ಕ್ಕೆ ಮಲಗಿ 10 ಗಂಟೆಗೆ ಎಚ್ಚರ: ಇದು ಈ ಸ್ಟಾರ್​ ನಟನ ಫಿಟ್​ನೆಸ್ ರಹಸ್ಯ! Star Hero

Star Hero : ಈ ಇಳಿ ವಯಸ್ಸಿನಲ್ಲೂ ಇಷ್ಟೊಂದು ಫಿಟ್​ ಆಗಿ, ಚಿರಯುವಕನಂತೆ ಕಾಣುತ್ತಿದ್ದೀರಲ್ಲ ನಿಮ್ಮ ಆರೋಗ್ಯದ ಗುಟ್ಟೇನು ಅಂತ ಯಾರನ್ನಾದರೂ ಪ್ರಶ್ನೆ ಮಾಡಿದರೆ, ಸಾಮಾನ್ಯವಾಗಿ ಅವರಿಂದ ಬರುವ ಉತ್ತರ ಒಂದೇ ಆಗಿರುತ್ತವೆ. ಅದೇನೆಂದರೆ, ನಾನು ಬೆಳಗ್ಗೆ ಬೇಗನೆ ಏಳುತ್ತೇನೆ, ವ್ಯಾಯಾಮ ಮಾಡುತ್ತೇನೆ, ತಾಜಾ ಹಣ್ಣುಗಳನ್ನು ತಿನ್ನುತ್ತೇನೆ, ಕೆಟ್ಟ ಅಭ್ಯಾಸಗಳಿಂದ ದೂರವಿರುತ್ತೇನೆ, ರಾತ್ರಿ ಬೇಗನೆ ಮಲಗುತ್ತೇನೆ ಮತ್ತು ಕನಿಷ್ಠ 7 ಗಂಟೆಗಳ ನಿದ್ದೆ ಮಾಡುತ್ತೇನೆ ಎಂಬುದು. ಆದರೆ, ಇಲ್ಲೊಬ್ಬ ಸ್ಟಾರ್​ ಹೀರೋ ಹೇಳುವುದೇ ಬೇರೆ. ಇನ್ನು ಎರಡು ತಿಂಗಳಲ್ಲಿ 60 ವರ್ಷ ತುಂಬಲಿರುವ ಈ ನಾಯಕ ಈಗಾಗಲೇ ಸಿಕ್ಸ್ ಪ್ಯಾಕ್ ಮಾತ್ರವಲ್ಲದೆ ಎಂಟು ಪ್ಯಾಕ್ ಕೂಡ ಮಾಡಿದ್ದಾರೆ. ಅದೂ ಕೂಡ, ಮದ್ಯಪಾನ ಮಾಡುತ್ತಾ, ರಾತ್ರಿ ಸರಿಯಾಗಿ ಮಲಗದೆಯೂ ಫಿಟ್​ನೆಸ್​ ಕಾಯ್ದುಕೊಂಡಿದ್ದಾರೆ. ಹಾಗಾದರೆ, ಆ ನಾಯಕ ಯಾರು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.

ಅವರೇ ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್. ಇವರು ನವೆಂಬರ್ 2 ರಂದು 60 ವರ್ಷಕ್ಕೆ ಕಾಲಿಡಲಿದ್ದಾರೆ. ಆದರೆ, ಶಾರುಖ್​ ಕಾಯ್ದುಕೊಂಡಿರುವ ಫಿಟ್​ನೆಸ್​ ಅವರ ಅರ್ಧದಷ್ಟು ವಯಸ್ಸಿನ ಪುರುಷರನ್ನು ಸಹ ನಾಚಿಕೆಪಡಿಸುತ್ತದೆ. ಶಾರುಖ್​ ಅವರು ಕಳೆದ ಹಲವಾರು ವರ್ಷಗಳಿಂದ ಗ್ರೀಕ್ ನಾಯಕನನ್ನು ಹೋಲುವ ದೇಹದ ಆಕಾರವನ್ನು ಹೊಂದಿದ್ದಾರೆ. ಅವರು ಇತ್ತೀಚೆಗೆ ತಮ್ಮ ಫಿಟ್‌ನೆಸ್ ಅಭ್ಯಾಸ ಮತ್ತು ಆಹಾರ ಶಿಸ್ತಿನ ಬಗ್ಗೆ ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡರು. ಇಂಗ್ಲಿಷ್ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಫಿಟ್‌ ಆಗಿರಲು ತಾವು ಅನುಸರಿಸುವ ದಿನಚರಿಗಳನ್ನು ವಿವರಿಸಿದರು.

ತಡರಾತ್ರಿ ವ್ಯಾಯಾಮ

ನಾನು ಬೆಳಗ್ಗೆ ಐದು ಗಂಟೆಗೆ ಮಲಗುತ್ತೇನೆ ಮತ್ತು ಒಂಬತ್ತು ಅಥವಾ ಹತ್ತು ಗಂಟೆಗೆ ಎಚ್ಚರಗೊಳ್ಳುತ್ತೇನೆ ಎಂದು ಶಾರುಖ್​ ಸಂದರ್ಶನದಲ್ಲಿ ಹೇಳಿದರು. ಪ್ರತಿದಿನ ಮಧ್ಯರಾತ್ರಿಯ ನಂತರ ಕೆಲಸ ಮುಗಿಸಿ ಎರಡು ಗಂಟೆಗೆ ಮನೆಗೆ ಹಿಂತಿರುಗುತ್ತಾರಂತೆ ಶಾರುಖ್​. ಮನೆಗೆ ಬಂದ ಬಳಿಕ ವ್ಯಾಯಾಮ ಮಾಡುತ್ತಾರಂತೆ. ಬಹುಶಃ ಹೆಚ್ಚಿನ ಜನರಿಗೆ ಇದು ಅಸಾಧ್ಯ ಎನ್ನಬಹುದು. ಆದರೆ, ಶಾರುಖ್‌ಗೆ, ಕೆಲವು ವರ್ಷಗಳಿಂದ ಇದು ಸಾಮಾನ್ಯ ದಿನಚರಿಯಾಗಿಬಿಟ್ಟಿದೆ.

ತಂದೂರಿ ಚಿಕನ್ ಪಂಚ ಪ್ರಾಣ

ವ್ಯಾಯಾಮ ಮಾಡಿದ ಬಳಿಕ ಸ್ನಾನ ಮುಗಿಸಿ, ಬೆಳಗ್ಗೆ 5 ಗಂಟೆಗೆ ಶಾರುಖ್​ ಮಲಗುತ್ತಾರೆ. ಅಲ್ಲದೆ, ಕುತೂಹಲಕಾರಿ ಸಂಗತಿ ಏನೆಂದರೆ, ಶಾರುಖ್ ಹಣ್ಣುಗಳನ್ನು ತಿನ್ನುವುದಿಲ್ಲವಂತೆ. ಇದೇ ವೇಳೆ ತಮ್ಮ ಮಾದಕ ವ್ಯಸನದ ಬಗ್ಗೆ ಮಾತನಾಡಿದ ಶಾರುಖ್​, ನಾನು ಒಂದು ನಿರ್ದಿಷ್ಟ ಪಾತ್ರಕ್ಕಾಗಿ ಆಕಾರ ಪಡೆಯಲು ಮಾತ್ರ ಮದ್ಯವನ್ನು ತ್ಯಜಿಸುತ್ತೇನೆ. ಉಳಿದಂತೆ ಮಧ್ಯ ಸೇವನೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಅಲ್ಲದೆ, ನಾನು ಬಿಳಿ ಬ್ರೆಡ್, ಬಿಳಿ ಅನ್ನ ಮತ್ತು ಸಿಹಿತಿಂಡಿಗಳನ್ನು ಆಗಾಗ ತಿನ್ನುತ್ತೇನೆ. ಕೆಲವೊಮ್ಮೆ ಐಸ್ ಕ್ರೀಮ್ ಅಥವಾ ಚಾಕೊಲೇಟ್ ತಿನ್ನುತ್ತೇನೆ ಎಂದು ಹೇಳುವ ಶಾರುಖ್, ಜಂಕ್ ಫುಡ್ ಅಥವಾ ಸಿಹಿತಿಂಡಿಗಳನ್ನು ಇಷ್ಟಪಡುವುದಿಲ್ಲ ಎಂದಿದ್ದಾರೆ. ತಂದೂರಿ ಚಿಕನ್ ಎಂದರೆ ನನಗೆ ಪಂಚ ಪ್ರಾಣ. ದಶಕಗಳಿಂದ ನಾನು ಎಂದಿಗೂ ಬಿಟ್ಟುಕೊಡದ ಒಂದು ಖಾದ್ಯವಿದ್ದರೆ ಅದು ತಂದೂರಿ ಚಿಕನ್. ಇದು ನನ್ನ ಆರಾಮದಾಯಕ ಆಹಾರ. ನಾನದಕ್ಕೆ ವ್ಯಸನಿಯಾಗಿದ್ದೇನೆ. ಅಗತ್ಯವಿದ್ದರೆ, ನಾನದನ್ನು 365 ದಿನವೂ ತಿನ್ನುತ್ತೇನೆ ಎಂದು ಶಾರುಖ್​ ಹೇಳಿದ್ದಾರೆ.

ದೇಹವನ್ನು ತ್ವರಿತವಾಗಿ ಬದಲಾಯಿಸಲು ಈ ತಂತ್ರ

ನನ್ನದೇಯಾದ ಕೆಲವೊಂದಿಷ್ಟು ಅಭ್ಯಾಸಗಳಿವೆ. ಅವುಗಳಲ್ಲಿ ಪ್ರಮುಖವಾದದ್ದು ಕಠಿಣ ಪರಿಶ್ರಮ, ಪ್ರೋಟೀನ್ ಭರಿತ ಹಾಗೂ ಶುದ್ಧ ಆಹಾರ ಎಂದಿರುವ ಶಾರುಖ್, ನಾನು ಗ್ರಿಲ್ಡ್ ಚಿಕನ್ ಹಾಗೂ ದ್ವಿದಳ ಧಾನ್ಯಗಳನ್ನು ತಿನ್ನುತ್ತೇನೆ. ನಾನು ಮೊಟ್ಟೆಯ ಬಿಳಿಭಾಗವನ್ನು ಮಾತ್ರ ತಿನ್ನುತ್ತೇನೆ. ಆದರೆ, ನಾನು ಸಣ್ಣ ಪ್ರಮಾಣದಲ್ಲಿ ಮಾತ್ರ ಆಹಾರವನ್ನು ತಿನ್ನುತ್ತೇನೆ ಎಂದರು. ವಿವಿಧ ಸಿನಿಮಾಗಳ ಪಾತ್ರಗಳ ಬೇಡಿಕೆಗಳಿಗೆ ತಕ್ಕಂತೆ ತನ್ನ ದೇಹವನ್ನು ತ್ವರಿತವಾಗಿ ಬದಲಾಯಿಸಲು ನಾನು ಈ ತಂತ್ರಗಳನ್ನು ಅನುಸರಿಸುತ್ತೇನೆ ಎಂದು ಹೇಳಿದರು.

ಇದೇ ನನ್ನ ಊಟದ ಮೆನು

ಸಿನಿಮಾ ಸೆಟ್‌ಗಳಲ್ಲಿ ತಯಾರಿಸಿದ ಆಹಾರಕ್ಕಿಂತ ಮನೆಯಲ್ಲಿ ಬೇಯಿಸಿದ ಊಟವನ್ನು ತಿನ್ನಲು ಇಷ್ಟಪಡುತ್ತೇನೆ. ನನ್ನ ಸಾಮಾನ್ಯ ಊಟದಲ್ಲಿ ಹೆಚ್ಚಾಗಿ ಮೀನು ಅಥವಾ ತಂದೂರಿ ಚಿಕನ್ ಇರುತ್ತದೆ. ಕೆಲವೊಮ್ಮೆ ಬೀನ್ಸ್ ಅಥವಾ ಕೆಲವು ತರಕಾರಿ ಕರಿ ಇರುತ್ತದೆ. ಸಾಮಾನ್ಯವಾಗಿ ತಂದೂರಿ ರೊಟ್ಟಿಯೊಂದಿಗೆ ತಂದೂರಿ ಚಿಕನ್ ಅಥವಾ ಸಾಂದರ್ಭಿಕವಾಗಿ ಮಟನ್ ಖಾದ್ಯ ಇರುತ್ತದೆ. ಇದೇ ನನ್ನ ಊಟದ ಮೆನು ಎಂದು ಶಾರುಖ್​ ಹೇಳಿದ್ದಾರೆ.

ಶಾರುಖ್​ ಅವರ ಪತ್ನಿ ಗೌರಿ ಖಾನ್​, ಚಲನಚಿತ್ರ ನಿರ್ಮಾಪಕಿ ಮತ್ತು ಇಂಟಿರಿಯರ್​ ಡಿಸೈನರ್ ಎಂಬುದು ಎಲ್ಲರಿಗೂ ಗೊತ್ತಿದೆ. ಅವರು ಜೀರ್ಣಕಾರಿ ಬಿಸ್ಕತ್ತುಗಳೊಂದಿಗೆ ತಯಾರಿಸುವ ಐಸ್ ಕ್ರೀಮ್ ಅನ್ನು ಶಾರುಖ್​ ಸೇವಿಸುತ್ತಾರಂತೆ. 50ರ ದಶಕದ ನಂತರ ಫಿಟ್ ಆಗಿರುವುದು ಅಂದರೆ ಹಸಿವಿನಿಂದ ಬಳಲುವುದು ಎಂದಲ್ಲ. ನಿಮ್ಮ ದೇಹ ಹೇಗೆ ಕೆಲಸ ಮಾಡುತ್ತದೆ ಎಂದು ತಿಳಿದುಕೊಂಡು ಅದಕ್ಕೆ ತಕ್ಕಂತೆ ಕಾರ್ಯನಿರ್ವಹಿಸುವುದು ಮುಖ್ಯ ಎಂದು ಶಾರುಖ್ ಹೇಳುತ್ತಾರೆ. (ಏಜೆನ್ಸೀಸ್​)