ಚೆನ್ನೈ: ಬಾಹುಬಲಿ ಸಿನಿಮಾ ಬರುವವರೆಗೂ ನಟ ಸತ್ಯರಾಜ್ ಅವರು ತಮಿಳಿಗರಿಗೆ ಬಿಟ್ಟು ಬೇರೆ ಯಾರಿಗೂ ಪರಿಚಯವಿರಲಿಲ್ಲ. ಯಾವಾಗ ಬಾಹುಬಲಿ ಭಾಗ ಒಂದು ಮತ್ತು ಎರಡರಲ್ಲಿ ಕಟ್ಟಪ್ಪ ಪಾತ್ರದಲ್ಲಿ ಮಿಂಚಿದರೋ ಅಂದಿನಿಂದ ಪ್ಯಾನ್ ಇಂಡಿಯಾ ನಟನಾಗಿದ್ದಾರೆ. ಅಲ್ಲದೆ, ಸಾಕಷ್ಟು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಪ್ರಧಾನಿ ಮೋದಿಯವರ ಜೀವನದ ಮೇಲೆ ಮತ್ತೊಂದು ಬಯೋಪಿಕ್ ರೆಡಿಯಾಗುತ್ತಿದ್ದು, ಮೋದಿ ಪಾತ್ರದಲ್ಲಿ ಸತ್ಯರಾಜ್ ನಟಿಸಲಿದ್ದಾರೆ ಎಂಬ ಮಾತುಗಳು ಸಹ ಕೇಳಿಬರುತ್ತಿವೆ. ಇದರ ನಡುವೆ ಸತ್ಯರಾಜ್ ಅವರು ಕೂದಲು ಇಲ್ಲದ ತಮ್ಮ ಮೊಟ್ಟೆ ತಲೆಯ ಬಗ್ಗೆ ಮಾತನಾಡಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಕಟ್ಟಪ್ಪನ ಪಾತ್ರವನ್ನು ನೀವು ಗಮನಿಸಿರಬಹುದು. ಉದ್ದ ಗಡ್ಡ ಮತ್ತು ಬೋಳು ತಲೆಯಲ್ಲಿ ಸತ್ಯರಾಜ್ ಕಾಣಿಸಿಕೊಂಡಿದ್ದಾರೆ. ನಿಜ ಜೀವನದಲ್ಲೂ ಸತ್ಯರಾಜ್ ಅವರದ್ದು ಬೋಳು ತಲೆ. ಕೂದಲು ಉದುರಿ ಬೋಳು ತಲೆಯಾಗಲು ಕಾರಣ ಏನು ಎಂಬುದನ್ನು ಇದೀಗ ಸತ್ಯರಾಜ್ ವಿವರಿಸಿದ್ದಾರೆ.
ಅಂದಹಾಗೆ ಸತ್ಯರಾಜ್ ಅವರು 80ರ ದಶಕದಲ್ಲಿ ತಮಿಳು ಚಿತ್ರರಂಗದಲ್ಲಿ ಖಡಕ್ ಖಳನಾಯಕನಾಗಿ ನಟಿಸಿದರು. ಸುಮಾರು 40 ವರ್ಷಗಳ ಸುದೀರ್ಘ ಸಿನಿ ಪಯಾಣ ಮಾಡಿದ್ದು, ಸಾಕಷ್ಟು ಅನುಭವವನ್ನು ಹೊಂದಿದ್ದಾರೆ. ಇಂದಿಗೂ ಸಾಕಷ್ಟು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಸದ್ಯ ಅವರು ನಟ ವಸಂತ್ ರವಿ ನಟನೆಯ ಮತ್ತು ಗುಹಾನ್ ಸೆನ್ನಿಯಪ್ಪನ್ ನಿರ್ದೇಶನದ ವೆಪನ್ ಚಿತ್ರದಲ್ಲಿ ನಟಿಸಿದ್ದು, ಈ ಸಿನಿಮಾ ಮೇ 23ಕ್ಕೆ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.
ವೆಪನ್ ಸಿನಿಮಾ ಬಿಡುಗಡೆ ದಿನಾಂಕ ಹತ್ತಿರವಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ಮಾಧ್ಯಮ ಸಂದರ್ಶನದಲ್ಲಿ ಭಾಗವಹಿಸಿದ ಸತ್ಯರಾಜ್, ಕಾಲಿವುಡ್ ಖ್ಯಾತ ನಿರ್ದೇಶಕ ಕೆ.ಎಸ್. ರವಿಕುಮಾರ್ ಬಗ್ಗೆ ಮಾತನಾಡುತ್ತಾ, ನಾನು ಅನೇಕ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡಿದ್ದೇನೆ. ರವಿಕುಮಾರ್ ನಿರ್ದೇಶನದ ಎರಡು ಸಿನಿಮಾಗಳನ್ನು ನಾನು ಮಿಸ್ ಮಾಡಿಕೊಂಡೆ. ಆ ಎರಡೂ ಸಿನಿಮಾಗಳು ಸೂಪರ್ ಡೂಪರ್ ಹಿಟ್ ಆದವು. ಅಂತಹ ಸಿನಿಮಾಗಳಲ್ಲೇ ನಾನು ನಟಿಸಲಿಲ್ಲ.
ರವಿಕುಮಾರ್ ಮತ್ತು ನನ್ನ ಸಿನಿಮಾ ಒಂದೇ ದಿನ ಬಿಡುಗಡೆಯಾಯಿತು. ನನ್ನ ಸಿನಿಮಾ ಕೇವಲ ಎರಡೇ ವಾರ ಓಡಿತು. ಆದರೆ, ರವಿಕುಮಾರ್ ಸಿನಿಮಾ 25 ವಾರಗಳ ಯಶಸ್ವಿ ಪ್ರದರ್ಶನ ಕಂಡಿತು. ಇದನ್ನು ನೋಡಿ ನಾನು ನೆಮ್ಮದಿಯಾಗಿ ಮಲಗಲು ಸಾಧ್ಯವೇ? ಅಲ್ಲಿಯವರೆಗೂ ನನ್ನ ಕೂದಲು ಚೆನ್ನಾಗಿಯೇ ಇತ್ತು. ಆದರೆ, ನಂತರದಲ್ಲಿ ಕೂದಲು ಉದುರಲು ಆರಂಭವಾಯಿತು. ಕೊನೆಗೂ ಬೋಳು ತಲೆಯಾಯಿತು ಎಂದು ಸತ್ಯರಾಜ್ ಹಾಸ್ಯ ಚಟಾಕಿ ಹಾರಿಸಿದರು. (ಏಜೆನ್ಸೀಸ್)