ಸಿನಿವಾಣಿ

ಕನ್ನಡದ ಅಂಗಳದಲ್ಲೂ ಮಾರ್ದನಿಸಿದ 'ತೆನಿಸೈ ತೆಂಡ್ರಲ್' ಗಾನಸುಧೆ: ವಿಷ್ಣುದಾದರ ಚಿತ್ರಗಳಿಗೆ ಜೀವತುಂಬಿದ್ರು ದೇವ್! | Deva

ಚೆನ್ನೈ: ಭಾರತೀಯ ಚಿತ್ರರಂಗದ ದಿಗ್ಗಜ ಸಂಗೀತ ನಿರ್ದೇಶಕ ಹಾಗೂ ದಕ್ಷಿಣ ಭಾರತದಲ್ಲಿ ತೆನಿಸೈ ತೆಂಡ್ರಲ್ (ಸಂಗೀತದ ತಂಗಾಳಿ) ಎಂದೇ ಖ್ಯಾತರಾಗಿದ್ದ ದೇವ್ (ದೇವನೇಶನ್ ಚೊಕ್ಕಲಿಂಗಂ) ಅವರು ಹೃದಯಾಘಾತದಿಂದ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ಅವರ ಅಗಲಿಕೆಯಿಂದ ದಕ್ಷಿಣ ಭಾರತದ ಸಂಗೀತ ಲೋಕ ಒಬ್ಬ ದಿಗ್ಗಜನನ್ನು ಕಳೆದುಕೊಂಡಂತಾಗಿದೆ.

ಚೆನ್ನೈ: ಭಾರತೀಯ ಚಿತ್ರರಂಗದ ದಿಗ್ಗಜ ಸಂಗೀತ ನಿರ್ದೇಶಕ ಹಾಗೂ ದಕ್ಷಿಣ ಭಾರತದಲ್ಲಿ ತೆನಿಸೈ ತೆಂಡ್ರಲ್ (ಸಂಗೀತದ ತಂಗಾಳಿ) ಎಂದೇ ಖ್ಯಾತರಾಗಿದ್ದ ದೇವ್ (ದೇವನೇಶನ್ ಚೊಕ್ಕಲಿಂಗಂ) ಅವರು ಹೃದಯಾಘಾತದಿಂದ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ಅವರ ಅಗಲಿಕೆಯಿಂದ ದಕ್ಷಿಣ ಭಾರತದ ಸಂಗೀತ ಲೋಕ ಒಬ್ಬ ದಿಗ್ಗಜನನ್ನು ಕಳೆದುಕೊಂಡಂತಾಗಿದೆ.

ದೇವ್ ಅವರು ತಮಿಳು ಮಾತ್ರವಲ್ಲದೆ ಕನ್ನಡ ಚಲನಚಿತ್ರ ರಂಗದಲ್ಲೂ ಅವರು ಬಿಟ್ಟುಹೋಗಿರುವ ಸಂಗೀತದ ಮೈಲಿಗಲ್ಲುಗಳು ಎಂದೆಂದಿಗೂ ಸ್ಮರಣೀಯವಾಗಿ ಉಳಿಯಲಿವೆ.

ಇದನ್ನೂ ಓದಿ:ಚುನಾವಣಾ ಆಯೋಗದ ವಿರುದ್ಧ ಹೋರಾಟ: ನವೆಂಬರ್ 1ರ ವಿಪಕ್ಷಗಳ ರ‍್ಯಾಲಿಗೆ ದೆಹಲಿ ಪೊಲೀಸರ ಗ್ರೀನ್ ಸಿಗ್ನಲ್! | Congress Rally

ದಕ್ಷಿಣ ಭಾರತದ ಬಹುಭಾಷೆಗಳಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದ ದೇವ್, ಸ್ಯಾಂಡಲ್‌ವುಡ್‌ನಲ್ಲೂ ಅನೇಕ ಸೂಪರ್‌ಹಿಟ್ ಚಿತ್ರಗಳಿಗೆ ಜೀವತುಂಬಿದ್ದಾರೆ. ವಿಶೇಷವಾಗಿ ಕನ್ನಡ ಚಿತ್ರರಂಗದ ಸಾರ್ವಕಾಲಿಕ ಕ್ಲಾಸಿಕ್ ಚಲನಚಿತ್ರವಾದ ಅಮೃತವರ್ಷಿಣಿ ಚಿತ್ರದ ಹಾಡುಗಳು ಕನ್ನಡದ ಸಂಗೀತ ಲೋಕದಲ್ಲಿ ಇತಿಹಾಸ ಸೃಷ್ಟಿಸಿದವು. ಈ ಚಿತ್ರದ ಮಧುರ ಸಂಗೀತ ಸಂಯೋಜನೆಗಾಗಿ ಪ್ರತಿಷ್ಠಿತ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ (Best Music Director) ಒಲಿದುಬಂದಿತ್ತು. ಎಸ್‌ಪಿ ಬಾಲಸುಬ್ರಹ್ಮಣ್ಯಂ, ಕೆ.ಎಸ್. ಚಿತ್ರಾ, ರಾಜೇಶ್ ಕೃಷ್ಣನ್ ಸೇರಿದಂತೆ ಅಗ್ರಗಣ್ಯ ಗಾಯಕರು ದೇವ್ ಅವರ ಸುಂದರ ರಾಗಗಳಿಗೆ ಧ್ವನಿಯಾಗಿ ಕನ್ನಡಿಗರ ಮನಸೂರೆಗೊಂಡಿದ್ದರು.

ಕೋಟಿಗೊಬ್ಬ, ಸಿಂಹಾದ್ರಿಯ ಸಿಂಹ...

ಕೇವಲ ಪ್ರೇಮಗೀತೆಗಳು ಮಾತ್ರವಲ್ಲದೆ, ಸಾಹಸಸಿಂಹ ಡಾ. ವಿಷ್ಣುವರ್ಧನ್ ಅಭಿನಯದ ಕೋಟಿಗೊಬ್ಬ, ಸಿಂಹಾದ್ರಿಯ ಸಿಂಹ, ಯೋಗೆಶ್ವರ್​ ನಟನೆಯ ಸೈನಿಕ, ನಾನು ನಾನೇ ಮುಂತಾದ ಚಲನಚಿತ್ರಗಳಿಗೂ ದೇವ್ ಹಿನ್ನೆಲೆ ಸಂಗೀತವನ್ನು ನೀಡಿದ್ದಾರೆ. ಇತರೆ ಭಾಷೆಯಿಂದ ಕನ್ನಡಕ್ಕೆ ಡಬ್ ಆದ ಅನೇಕ ಮೆಗಾಹಿಟ್ ಚಿತ್ರಗಳ ಮೂಲಕವೂ ಅವರು ಕರ್ನಾಟಕದ ಮನೆಮಾತಾಗಿದ್ದರು. ಜನಸಾಮಾನ್ಯರ ನಾಡಿಗೆ ತಕ್ಕಂತೆ ಸರಳವಾದ ಸಾಹಿತ್ಯಕ್ಕೆ ಸುಲಭವಾಗಿ ಗುನುಗುವಂತಹ ಟ್ಯೂನ್‌ಗಳನ್ನು ನೀಡುವುದು ಇವರ ಸಂಗೀತ ಶೈಲಿಯ ವಿಶೇಷತೆಯಾಗಿತ್ತು.

ಜಾನಪದ ಹಾಗೂ ಗಾನಾ ಶೈಲಿಯ ಮೇರು ನಾಯಕ

ತಮಿಳು ಚಿತ್ರರಂಗದಲ್ಲಿ ಜನಸಾಮಾನ್ಯರ ಧಾಟಿಯ ಜಾನಪದ ಹಾಗೂ ಗಾನಾ ಶೈಲಿಯನ್ನು ಸಿನಿಮಾಗಳಿಗೆ ಪರಿಚಯಿಸಿ ಹೊಸ ಕ್ರಾಂತಿ ಸೃಷ್ಟಿಸಿದ್ದ ದೇವ್, ಸೂಪರ್‌ಸ್ಟಾರ್ ರಜನಿಕಾಂತ್, ಕಮಲ್ ಹಾಸನ್ ಸೇರಿದಂತೆ ಅನೇಕ ದಿಗ್ಗಜ ನಟರ ಚಿತ್ರಗಳಿಗೆ ಸ್ಮರಣೀಯ ಇಂಟ್ರೋ ಸಾಂಗ್‌ಗಳು ಹಾಗೂ ಎವರ್‌ಗ್ರೀನ್ ಆಲ್ಬಮ್‌ಗಳನ್ನು ನೀಡಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ನೂರಾರು ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿರುವ ಅವರು, ಸ್ವತಃ ಉತ್ತಮ ಗಾಯಕರಾಗಿಯೂ ಹಲವಾರು ಹಿಟ್ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಅವರ ಕುಟುಂಬದಲ್ಲೂ ಮಗ ಶ್ರೀಕಾಂತ್ ದೇವ್ ಸೇರಿದಂತೆ ಹಲವರು ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಅವರ ಪರಂಪರೆಯನ್ನು ಮುಂದುವರಿಸುತ್ತಿದ್ದಾರೆ.

ಭೌತಿಕವಾಗಿ ದೇವ್ ನಮ್ಮಿಂದ ಅಗಲಿದ್ದರೂ, ಅವರು ಕನ್ನಡ ಹಾಗೂ ಭಾರತೀಯ ಚಿತ್ರರಂಗಕ್ಕೆ ನೀಡಿರುವ ಅಮೂಲ್ಯವಾದ ಸಂಗೀತ ಸುಧೆ ಅಜರಾಮರವಾಗಿದೆ. ಅವರ ಮಧುರವಾದ ಹಾಡುಗಳು ಮತ್ತು ರಾಗಗಳ ಮಾಂತ್ರಿಕತೆ ಎಂದೆಂದಿಗೂ ಸಂಗೀತ ಪ್ರಿಯರ ಹೃದಯದಲ್ಲಿ ಜೀವಂತವಾಗಿರುತ್ತದೆ. ಅವರ ಅಗಲಿಕೆಗೆ ದಕ್ಷಿಣ ಭಾರತದ ಸಿನಿಮಾ ರಂಗ ಹಾಗೂ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ(ಏಜೆನ್ಸೀಸ್​).