

Mumbai Indians: ಮುಂಬರುವ 2027ರ ಐಪಿಎಲ್ಗೂ ಮುನ್ನ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದಲ್ಲಿ ಮಹತ್ವದ ಬದಲಾವಣೆಗಳು ನಡೆಯುತ್ತಿವೆ. ತಂಡದ ಯಶಸ್ವಿ ಕೋಚ್ಗಳಲ್ಲಿ ಒಬ್ಬರಾದ ಮಹೇಲಾ ಜಯವರ್ಧನೆ ಹಾಗೂ ಮುಂಬೈ ಫ್ರಾಂಚೈಸಿ ಪರಸ್ಪರ ಒಪ್ಪಂದದ ಮೇರೆಗೆ ಬೇರ್ಪಡಲು ನಿರ್ಧರಿಸಿದ್ದು, ಈ ನಿರ್ಗಮನವು ತಂಡದಲ್ಲಿ ದೊಡ್ಡ ಮಟ್ಟದ ಬದಲಾವಣೆಯ ಮುನ್ಸೂಚನೆಯಾಗಿದೆ. ಇದರೊಂದಿಗೆ ತಂಡದ ನಾಯಕತ್ವದ ಕುರಿತಾಗಿಯೂ ಹೊಸ ಚರ್ಚೆಗಳು ಮುನ್ನೆಲೆಗೆ ಬಂದಿದ್ದು, ರೋಹಿತ್ ಶರ್ಮಾ ಅವರು ಮತ್ತೆ ಮುಂಬೈ ತಂಡದ ನಾಯಕನಾಗಿ ಕಣಕ್ಕಿಳಿಯಬಹುದು ಎಂಬ ಊಹಾಪೋಹಗಳು ಜೋರಾಗಿವೆ.
ಮಹೇಲಾ ಜಯವರ್ಧನೆ ನಿರ್ಗಮನದೊಂದಿಗೆ ಮುಂಬೈ ಇಂಡಿಯನ್ಸ್ ಜೊತೆಗಿನ ಅವರ ಸುದೀರ್ಘ ಹಾಗೂ ಯಶಸ್ವಿ ಅಧ್ಯಾಯಕ್ಕೆ ತೆರೆಬಿದ್ದಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಮಹೇಲಾ, ಮುಂಬೈ ಇಂಡಿಯನ್ಸ್ ಕಳೆದ ಒಂದು ದಶಕದಿಂದ ನನ್ನ ಪ್ರಯಾಣದ ಅತ್ಯಂತ ವಿಶೇಷ ಭಾಗವಾಗಿದೆ. ಆಟಗಾರರು, ಕೋಚಿಂಗ್ ಸಿಬ್ಬಂದಿ, ಒನ್ ಫ್ಯಾಮಿಲಿ ಅಭಿಮಾನಿಗಳ ಬೆಂಬಲ ನನ್ನ ಜೀವನದಲ್ಲಿ ಸದಾ ಸ್ಮರಣೀಯ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಹಾಗೆಯೇ, ಮುಂಬೈ ಫ್ರಾಂಚೈಸಿ ಮಾಲಿಕರಾದ ನೀತಾ ಅಂಬಾನಿ ಮಾತನಾಡಿ, ತಂಡಕ್ಕೆ ಜಯವರ್ಧನೆ ನೀಡಿದ ಶಾಂತಿಯುತ ನಾಯಕತ್ವ, ಪ್ರಾಮಾಣಿಕತೆ ಮತ್ತು ಅಪಾರ ಕೊಡುಗೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಮಹೇಲಾ ಜಯವರ್ಧನೆ ಅವರ ಕೊಡುಗೆ ಕೇವಲ ಕೊನೆಯ ಅವಧಿಯ ಕೋಚಿಂಗ್ಗೆ ಮಾತ್ರ ಸೀಮಿತವಾಗಿಲ್ಲ. ಅವರು 2017ರಲ್ಲಿ ಮುಂಬೈ ತಂಡದ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡು, 2017, 2019 ಮತ್ತು 2020ರಲ್ಲಿ ಮುಂಬೈ ತಂಡಕ್ಕೆ ಮೂರು ಐಪಿಎಲ್ ಪ್ರಶಸ್ತಿಗಳನ್ನು ತಂದುಕೊಟ್ಟಿದ್ದರು. ಈ ಮೂಲಕ ಐಪಿಎಲ್ ಟೂರ್ನಿಯಲ್ಲಿ ಅತ್ಯಂತ ಯಶಸ್ವಿ ಕೋಚ್ಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದರು. ಪ್ರಸ್ತುತ ಅವರ ನಿರ್ಗಮನದಿಂದಾಗಿ ಮುಂಬೈ ಫ್ರಾಂಚೈಸಿಗೆ ಹೊಸ ಕೋಚಿಂಗ್ ರಚನೆಯನ್ನು ರೂಪಿಸುವುದು ದೊಡ್ಡ ಸವಾಲಾಗಿದೆ.
ಮಹೇಲಾ ನಿರ್ಗಮನದ ಬೆನ್ನಲ್ಲೇ ರೋಹಿತ್ ಶರ್ಮಾ ಅವರ ನಾಯಕತ್ವದ ಬಗೆಗಿನ ಚರ್ಚೆಗಳು ಮತ್ತೆ ಮುನ್ನಲೆಗೆ ಬಂದಿದ್ದು, ಮುಂಬರುವ ಆವೃತಿಗಾಗಿ ಮುಂಬೈ ಇಂಡಿಯನ್ಸ್ ಮ್ಯಾನೇಜ್ಮೆಂಟ್ ರೋಹಿತ್ ಅವರನ್ನೇ ಮತ್ತೆ ನಾಯಕನನ್ನಾಗಿ ನೇಮಿಸುವ ಕುರಿತು ಗಂಭೀರವಾಗಿ ಆಲೋಚಿಸುತ್ತಿದೆ ಎಂದು ವರದಿಯಾಗಿದೆ. ರೋಹಿತ್ ಶರ್ಮಾ ತಮ್ಮ ನಾಯಕತ್ವದಲ್ಲಿ ಮುಂಬೈಗೆ 2013, 2015, 2017, 2019 ಮತ್ತು 2020ರಲ್ಲಿ ಐದು ಪ್ರಶಸ್ತಿಗಳನ್ನು ಗೆದ್ದುಕೊಟ್ಟಿದ್ದಾರೆ.
ಐಪಿಎಲ್ 2024ರ ಹರಾಜಿಗೂ ಮುನ್ನ ಗುಜರಾತ್ ಟೈಟಾನ್ಸ್ನಿಂದ ಮರಳಿದ ಹಾರ್ದಿಕ್ ಪಾಂಡ್ಯ ಅವರಿಗೆ ನಾಯಕತ್ವದ ಜವಾಬ್ದಾರಿ ನೀಡಲಾಗಿತ್ತು. ಹಾರ್ದಿಕ್ ನೇತೃತ್ವದಲ್ಲಿ ತಂಡವು ಮೊದಲ ಸೀಸನ್ನಲ್ಲಿ ಕೊನೆಯ ಸ್ಥಾನ ಪಡೆದರೂ, 2025ರಲ್ಲಿ ಪ್ಲೇಆಫ್ ಹಂತಕ್ಕೇರುವಲ್ಲಿ ಯಶಸ್ವಿಯಾಯಿತು. ಆದರೆ 2020ರ ನಂತರ ಮುಂಬೈಗೆ ಇಲ್ಲಿಯವರೆಗೆ ಮತ್ತೊಮ್ಮೆ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ. ಸದ್ಯಕ್ಕೆ ಮುಂಬೈ ಇಂಡಿಯನ್ಸ್ನ ಪ್ರಮುಖ ಆದ್ಯತೆಯು ಜಯವರ್ಧನೆ ನಿರ್ಗಮನದ ಬಳಿಕ ಸೂಕ್ತ ಕೋಚಿಂಗ್ ವ್ಯವಸ್ಥೆಯನ್ನು ಸಿದ್ಧಪಡಿಸುವುದಾಗಿದೆ. ಇದರೊಂದಿಗೆ ರೋಹಿತ್ ಶರ್ಮಾ ಅವರಿಗೆ ಮತ್ತೆ ನಾಯಕತ್ವ ನೀಡುವ ಕುರಿತು ಫ್ರಾಂಚೈಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದು, ಇದು ಮುಂಬೈನ ಮುಂದಿನ ಹಾದಿಯನ್ನು ನಿರ್ಣಯಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ(ಏಜೆನ್ಸೀಸ್).