ಸಿನಿವಾಣಿ

ಕನ್ನಡಕ್ಕೆ ಡಬ್ ಆಗಲಿದೆಯೇ ‘ದಿ ಕಾಶ್ಮೀರ್​ ಫೈಲ್ಸ್​’? ರಾಜ್ಯ ಬಿಜೆಪಿಯ ಹೊಸ ಚಿಂತನೆ?

ಬೆಂಗಳೂರು: ಕಾಶ್ಮೀರ್ ಪಂಡಿತರ ಹತ್ಯೆ ಹಾಗೂ ಅವರ ವಲಸೆಯನ್ನು ಆಧರಿಸಿ ತೆಗೆದಿರುವ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಇಡೀ ದೇಶಾದ್ಯಂತ ಗಲ್ಲಾ ಪಟ್ಟೆಗೆ ಉಕ್ಕಿ ಹರಿಯುವಂತೆ ಮಾಡಿದೆ. ಹೌದು, ಕೇವಲ ಏಳು ದಿನಗಳಲ್ಲಿ ಅಥವಾ ಒಂದು ವಾರದಲ್ಲಿ ವಿವೇಕ್​ ಅಗ್ನಿಹೋತ್ರಿ ನಿರ್ದೇಶನದ ಈ ಸಿನಿಮಾ ಬರೋಬ್ಬರಿ 8 ರಾಜ್ಯಗಳಲ್ಲಿ ತೆರಿಗೆ ವಿನಾಯಿತಿ ಪಡೆದಿದ್ದು, 100 ಕೋಟಿ ಗಳಿಸಿದೆ ಎಂದು ವರದಿಗಳು ಹೇಳುತ್ತಿವೆ. ಈ ಸಿನಿಮಾ ಬಹುತೇಕ ಎಲ್ಲಾ ಕಡೆಗಳಿಂದ ಮೆಚ್ಚು ಪಡೆಯುತ್ತಿದೆ. ಅದರಲ್ಲಿಯೂ, ರಾಜಕೀಯ ವಲಯದಲ್ಲಿ ಈ ಸಿನಿಮಾ ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗಿದೆ.
ಇನ್ನು, ದೇಶದಲ್ಲಿ ಬಿಜೆಪಿ ಆಡಳಿತವಿರುವ ಹಲವು ರಾಜ್ಯಗಳಲ್ಲಿ ಈ ಸಿನಿಮಾವನ್ನು ಬಿಜೆಪಿ ಪಾರ್ಟಿಯ ರಾಜಕಾರಣಿಗಳು ಹಾಡಿ ಹೊಗಳಿದ್ದಾರೆ. ಈ ನಡುವೆ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾವನ್ನು ಕನ್ನಡಕ್ಕೆ ಡಬ್ ಮಾಡುವ ಬಗ್ಗೆ ರಾಜ್ಯ ಬಿಜೆಪಿ ರಾಜಕಾರಣಿಗಳು ಚಿಂತಿಸುತ್ತಿದ್ದಾರೆ ಎನ್ನಲಾಗಿದೆ. ಈ ಸುದ್ದಿ ಕೇಳಿದ ಹಲವು ಕನ್ನಡದ ಸಿನಿಪ್ರಿಯರು ದಿಲ್ ಖುಷ್ ಆಗಿದ್ದಾರೆ. ಹೌದು, ಉತ್ತರ ಭಾರತಕ್ಕೆ ಹೋಲಿಕೆ ಮಾಡಿದರೆ ಕರ್ನಾಟಕದಲ್ಲಿ ಹಿಂದಿ ಮಾತನಾಡುವವರ ಹಾಗೂ ಹಿಂದಿ ಭಾಷೆಯನ್ನು ಅರ್ಥೈಸಿಕೊಳ್ಳುವವರ ಸಂಖ್ಯೆ ಸಿಕ್ಕಾಪಟ್ಟೆ ಕಡಿಮೆ ಎಂದರೆ ತಪ್ಪಾಗುವುದಿಲ್ಲ.
ಇನ್ನು, ‘ದಿ ಕಾಶ್ಮೀರ್ ಫೈಲ್ಸ್​’ ಸಿನಿಮಾ ಸಂಪೂರ್ಣವಾಗಿ ಹಿಂದಿ ಭಾಷೆಯಲ್ಲಿ ಇರುವ ಕಾರಣಕ್ಕೆ ಸಿನಿಮಾವನ್ನು ಕನ್ನಡಕ್ಕೆ ಡಬ್ ಮಾಡಿದರೆ ಉತ್ತಮ ಅನ್ನೋದು ಬಿಜೆಪಿಯ ಆಲೋಚನೆಯಂತೆ. ಹೀಗಾಗಿ, ‘ದಿ ಕಾಶ್ಮೀರ್ ಫೈಲ್ಸ್​’ ಸಿನಿಮಾವನ್ನು ಜನರ ಮುಂದೆ ಕನ್ನಡದಲ್ಲಿ ಇಡಲು ಚಿಂತನೆ ನಡೆದಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಬಗ್ಗೆ ಆಪ್ತ ಸಚಿವರ ಜತೆ ಚರ್ಚೆ ನಡೆಸಿದ್ದಾರೆ ಎಂಬ ಮಾಹಿತಿ ಇದೆ. ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಕೂಡಾ ಈ ವಿಚಾರಕ್ಕೆ ಧ್ವನಿಗೂಡಿಸಿದ್ದಾರಂತೆ.