ಚೆನೈ: ಬರೀ ಸಿನಿಮಾಗಳಲ್ಲಿ ಮಾತ್ರ ಅಲ್ಲ, ಸೋಶಿಯಲ್ ಮೀಡಿಯಾಗಳಲ್ಲೂ ಸಿನಿ ತಾರೆಯರದ್ದೆ ಹವಾ. ಆದರೆ, ಇಡೀ ಭಾರತದಲ್ಲಿ ಮನರಂಜನಾ ವಿಭಾಗದಲ್ಲಿ ಕೇವಲ ಒಂದೇ ನಟ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಾರೆಂದರೆ ಅದು ಸಾಮಾನ್ಯ ವಿಷಯವೇ? ಇಲ್ಲ. ಅಂದಹಾಗೆ, ಭಾರತದಲ್ಲಿ ಅತಿ ಹೆಚ್ಚು ಚರ್ಚೆಯಾಗುತ್ತಿರುವ ವ್ಯಕ್ತಿ ತಮಿಳು ಸ್ಟಾರ್ ನಟ ವಿಜಯ್. ಟ್ವಿಟರ್ ಇಂಡಿಯಾ ಪ್ರತೀ ವರ್ಷವು ಡಿಸೆಂಬರ್ ತಿಂಗಳಲ್ಲಿ ಹಲವಾರು ವಿಭಾಗಗಳಲ್ಲಿ ಹೆಚ್ಚು ಟ್ವೀಟ್ಗಳನ್ನು ಪಡೆದ ವಿಚಾರಗಳ ಬಗ್ಗೆ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ.
ಹಾಗೆಯೇ, ಈ ವರ್ಷವು ಹೆಚ್ಚು ರೀಟ್ವೀಟ್ ಆದ ಟ್ವೀಟ್, ಹೆಚ್ಚು ಲೈಕ್ ಪಡೆದ ಟ್ವೀಟ್, ಹೆಚ್ಚು ಕಾಮೆಂಟ್ ಪಡೆದ ಟ್ವೀಟ್, ತುಂಬಾ ಫೇಮಸ್ ಆದ ಹ್ಯಾಶ್ಟ್ಯಾಗ್ ಎಂಬಂತೆ ಬೇರೆ ಬೇರೆ ವಿಭಾಗಗಳಲ್ಲಿ ಟ್ವಿಟರ್ ಇಂಡಿಯಾ ಒಂದು ಪಟ್ಟಿ ರಿಲೀಸ್ ಮಾಡಿತ್ತು. ಎಲ್ಲಾ ವಿಭಾಗಗಳ ಪೈಕಿ ಗಮನ ಸೆಳೆದಿರುವುದು ಹೆಚ್ಚು ರೀಟ್ವೀಟ್ ಆದ ಟ್ವೀಟ್. ಹೌದು, 2021 ರಲ್ಲಿ ವಿಜಯ್ ತಮ್ಮ ಮುಂಬರುವ ಸಿನಿಮಾ 'ಬೀಸ್ಟ್'ನ ಮೊದಲ ಪೋಸ್ಟರ್ ಅನ್ನು ಟ್ವಿಟರ್ನಲ್ಲಿ ಬಿಡುಗಡೆ ಮಾಡಿ ಅಭಿಮಾನಿಗಳಿಗೆ ಹಂಚಿಕೊಂಡಿದ್ದರು. ಅವರ ಈ ಒಂದು ಟ್ವೀಟ್ 2021ರಲ್ಲಿ ಮನರಂಜನಾ ವಿಭಾಗದ ಅತಿ ಹೆಚ್ಚು ರೀಟ್ವೀಟ್ ಆದ ಟ್ವೀಟ್ ಆಗಿ ಗುರುತಿಸಿಕೊಂಡಿದೆ. ಅತಿ ಹೆಚ್ಚು ಲೈಕ್ಗಳನ್ನು ಪಡೆದ ಟ್ವೀಟ್ ಸಹ ವಿಜಯ್ ಅವರ 'ಬೀಸ್ಟ್' ಎಂದು ತಿಳಿದುಬಂದಿದೆ.
ಇನ್ನು, ಇದೇ ವಿಭಾಗದಲ್ಲಿ ಕಳೆದ ವರ್ಷವು ನಟ ವಿಜಯ್ ಅವರೆ ನಂಬರ್ 1 ಆಗಿದ್ದರು. ದಳಪತಿ ವಿಜಯ್ 2020ರಲ್ಲಿ ತಮ್ಮ 'ಮಾಸ್ಟರ್' ಸಿನಿಮಾದ ಪೋಸ್ಟರ್ ಅನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದರು. ಆ ಟ್ವೀಟ್ 2020ರಲ್ಲಿ ಮನರಂಜನಾ ವಿಭಾಗದ ಅತಿ ಹೆಚ್ಚು ರೀಟ್ವೀಟ್ ಆದ ಟ್ವೀಟ್ ಆಗಿತ್ತು. ಹಾಗಾಗಿ, ಈ ವರ್ಷವು ಅಂದರೆ ಎರಡನೆ ಭಾರಿ ತಮಿಳು ಸ್ಟಾರ್ ನಟ ವಿಜಯ್ ನಂಬರ್ 1 ಎನಿಸಿಕೊಂಡಿದ್ದಾರೆ.
ಇದಿಷ್ಟೆ ಅಲ್ಲದೇ, ಅತಿ ಹೆಚ್ಚು ಟ್ವೀಟ್ ಆದ ಟಾಪ್ ಐದು ಸಿನಿಮಾಗಳ ಪಟ್ಟಿಯಲ್ಲಿ ನಟ ವಿಜಯ್ ಅವರದ್ದೆ ಎರಡು ಸಿನಿಮಾಗಳು ಇವೆ. ಮೊದಲನೇ ಸ್ಥಾನದಲ್ಲಿ 'ಬೀಸ್ಟ್' ಇದ್ದರೆ, ಮೂರನೇ ಸ್ಥಾನದಲ್ಲಿ 'ಮಾಸ್ಟರ್' ಇದೆ. ಎರಡನೆ ಸ್ಥಾನವನ್ನು ನಟ ಅಜಿತ್ ಅವರ 'ವಾಲಿಮಾ' ಸಿನಿಮಾ ಗಿಟ್ಟಿಸಿಕೊಂಡಿದೆ. ಇನ್ನು ನಾಲ್ಕನೆ ಸ್ಥಾನವನ್ನು ಸೂರ್ಯ ಅವರ 'ಜೈ ಭೀಮ್' ಚಿತ್ರ ಪಡೆದುಕೊಂಡಿದ್ದು, ಪವನ್ ಕಲ್ಯಾಣ್ ಅವರ 'ವಕೀಲ್ ಸಾಬ್' ಚಿತ್ರ 5ನೇ ಸ್ಧಾನದಲ್ಲಿದೆ. ಕಳೆದ ವರ್ಷವೆ ನಟ ವಿಜಯ್ ಟ್ವಿಟರ್ಗೆ ಕಾಲಿಟ್ಟಿದ್ದರೂ, ಅವರ ಅಸಂಖ್ಯಾತ ಅಭಿಮಾನಿಗಳಿಂದ ಎರಡು ವರ್ಷಗಳು ನಂಬರ್ 1 ಸ್ಥಾನ ಪಡೆದಿದ್ದಾರೆ ಎನ್ನಲಾಗಿದೆ.