ಸಿನಿವಾಣಿ

ಒಂದು ಕಾಲದಲ್ಲಿ ದುಡ್ಡಿಗಾಗಿ ಹಪಹಪಿಸುತ್ತಿದ್ದರಾ ಸೋನು?

ಹೈದರಾಬಾದ್: ನಟ ಸೋನು ಸೂದ್​ ಕಳೆದ ಒಂದು ವರ್ಷದಿಂದ ಕಷ್ಟದಲ್ಲಿರುವವರಿಗೆ ಎಷ್ಟೆಲ್ಲ ಸಹಾಯ ಮಾಡುತ್ತಿದ್ದಾರೆ ಎಂದು ಎಲ್ಲರಿಗೂ ಗೊತ್ತೇ ಇದೆ. ಲಾಕ್​ಡೌನ್​ನಿಂದ ಸಂಕಷ್ಟಕ್ಕೊಳಗಾದ ಜನರಿಗೆ ತಮ್ಮದೇ ರೀತಿಯಲ್ಲಿ ಅವರು ಸಹಾಯ ಮಾಡುತ್ತಿದ್ದಾರೆ. ಕಳೆದೊಂದು ವರ್ಷದಲ್ಲಿ ಅವರು ಕೋಟ್ಯಂತರ ರೂ.ಗಳ ದಾನ ಮಾಡಿದ್ದಾರೆ. ಆದರೆ, ಒಂದು ಕಾಲಕ್ಕೆ ಸೋನು ಹಣಕ್ಕಾಗಿ ಬಾಯಿಬಿಡುತ್ತಿದ್ದರಂತೆ. ಹಾಗಂತ ತೆಲುಗು ನಿರ್ಮಾಪಕ ತಮ್ಮಾರೆಡ್ಡಿ ಭಾರದ್ವಾಜ್​ ಹೇಳಿಕೊಂಡಿದ್ದಾರೆ.

ಐದಾರು ವರ್ಷಗಳ ಹಿಂದೆ ತಮ್ಮಾರೆಡ್ಡಿ ಒಮ್ಮೆ ಸೋನು ಸೂದ್​ ಅವರನ್ನು ಭೇಟಿ ಮಾಡಿದ್ದರಂತೆ. ಅಂಕವಿಕಲರ ಆಶ್ರಮಕ್ಕೆ ಸಂಬಂಧಿಸಿದ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ಆಹ್ವಾನ ನೀಡುವುದಕ್ಕೆ ಹೋದರಂತೆ. ಆದರೆ, ಮಾತ್ರ ಬಿಲ್​ಕುಲ್​ ಒಪ್ಪಿಲ್ಲ. ಸಮಾರಂಭಕ್ಕೆ ಬರುವುದಕ್ಕೆ ತಮಗೆ ದುಡ್ಡು ಕೊಡುವುದಾದರೆ ಮಾತ್ರ ಬರುವುದಾಗಿ ಹೇಳಿದರಂತೆ. ಹಾಗಾಗಿ, ಸೋನು ಸೂದ್​ ಪಕ್ಕಾ ಕಮರ್ಷಿಯಲ್​ ಮನುಷ್ಯ ಎಂಬ ಅಭಿಪ್ರಾಯ ತಮ್ಮಾರೆಡ್ಡಿ ಅವರಿಗೆ ಬಂದಿದೆ.

ಆದರೆ, ಈಗ ಸೋನು ಇಷ್ಟೊಂದು ಧನ ಸಹಾಯ ಮಾಡುತ್ತಿರುವುದನ್ನು ನೋಡಿ, ಅವರ ಬಗ್ಗೆ ಇದ್ದ ತಮ್ಮ ಅಭಿಪ್ರಾಯ ಸಾಕಷ್ಟು ಬದಲಾಗಿದೆ. 'ಸೋನು ತಮ್ಮ ಆಸ್ತಿಯನ್ನು ಅಡಮಾನ ಇಟ್ಟು ದುಡ್ಡು ತಂದು, ಸಹಾಯ ಮಾಡುತ್ತಿರುವುದು ಬಹಳ ಖುಷಿಯಾಗುತ್ತಿದೆ.ಅವರ ಬಗ್ಗೆ ಬೆಟ್ಟು ಮಾಡಿ ತೋರಿಸುವ ನೈತಿಕ ಅರ್ಹತೆ ಯಾರಿಗೂ ಇಲ್ಲ' ಎಂದು ತಮ್ಮಾರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇನ್ನು, ತೆಲಂಗಾಣಕ್ಕೆ ಮಾಡುತ್ತಿರುವ ಸೇವೆಯನ್ನು ಗಮನಿಸಿ ತೆಲಂಗಾಣದ ಮಾಹಿತಿ ತಂತ್ರಜ್ನಾನ ಸಚಿವ ಕೆಟಿಆರ್​, ಸೋನುಗೆ 'ಸೂಪರ್​ ಹೀರೋ' ಎಂಬ ಬಿರುತದನ್ನು ನೀಡಿದ್ದಾರೆ. ಆದರೆ, ಸೋನು ಮಾತ್ರ ತಾನು 'ಸೂಪರ್​ ಹೀರೋ' ಅಲ್ಲ, ಸಾಮಾನ್ಯ ಮನುಷ್ಯ ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ತೆಲಂಗಾಣ ತಮ್ಮ ಎರಡನೆಯ ಮನೆ ಇದ್ದಂತೆ ಎಂದು ಹೇಳಿದ್ದಾರೆ.