ಚಿತ್ರರಂಗದಲ್ಲಿ 52 ವರ್ಷಗಳನ್ನು ಪೂರೈಸಿದ ಬಿಗ್​ಬಿ ... ಅಭಿಮಾನಿಗಳ ಸಂಭ್ರಮ

Amitabh Bachchan - Final
Published on

ಮುಂಬೈ: ಬಾಲಿವುಡ್​ನ ಬಿಗ್​ಬಿ ಅಮಿತಾಭ್​ ಬಚ್ಚನ್​, ಚಿತ್ರರಂಗದಲ್ಲಿ ನಟನಾಗಿ 52 ವರ್ಷಗಳನ್ನು ಪೂರೈಸಿದ್ದಾರೆ. ಈ ಸಂದರ್ಭದಲ್ಲಿ ಅವರು ತಮ್ಮ ಈ ಐದು ದಶಕಗಳ ವೃತ್ತಿಜೀವನದಲ್ಲಿ ಮಾಡಿದ ಮಹತ್ವದ ಸಿನಿಮಾಗಳ ಕೊಲಾಜ್​ನ್ನು ಸೋಷಿಯಲ್​ ಮೀಡಿಯಾ ಮೂಲಕ ಶೇರ್​ ಮಾಡಿಕೊಂಡಿದ್ದಾರೆ.

ಅಮಿತಾಭ್​ ಬಚ್ಚನ್​ ಅವರು ಹಿಂದಿ ಚಿತ್ರರಂಗಕ್ಕೆ ನಟನಾಗಿ ಎಂಟ್ರಿ ಕೊಟ್ಟಿದ್ದು 1969ರಲ್ಲಿ ಕೆ.ಎ. ಅಬ್ಬಾಸ್​ ನಿರ್ದೇಶನದ 'ಸಾಥ್​ ಹಿಂದೂಸ್ತಾನಿ' ಚಿತ್ರದ ಮೂಲಕ ಅವರು ಬಾಲಿವುಡ್​ಗೆ ಎಂಟ್ರಿ ಕೊಟ್ಟರು. ಆ ಚಿತ್ರ 1969ರ ನವೆಂಬರ್​ನಲ್ಲಿ ಬಿಡಗುಡೆಯಾಗಿತ್ತಾದರೂ, ಚಿತ್ರೀಕರಣ ಪ್ರಾರಂಭಾವಾಗಿದ್ದು ಜೂನ್​ ಒಂದರಂದು ಹೇಳಲಾಗುತ್ತಿದೆ. ಹೀಗೆ ಮೊದಲ ಬಾರಿಗೆ ಬಣ್ಣ ಹಚ್ಚಿದ ದಿನವನ್ನು ಅಮಿತಾಬ್​ ಸೋಷಿಯಲ್​ ಮೀಡಿಯಾ ಮೂಲಕ ನೆನಪಿಸಿಕೊಂಡಿದ್ದಾರೆ.

ಈ ಕುರಿತು ಪೋಸ್ಟ್​ ಹಾಕಿರುವ ಅವರು, '52 ವರ್ಷಗಳು ಹೇಗೆ ಹೋಯಿತೋ ಎಂಬುದೇ ಗೊತ್ತಾಗುತ್ತಿಲ್ಲ. ಈಗಲೂ ನೆನಸಿಕೊಂಡರೆ ಆಶ್ಚರ್ಯವಾಗುತ್ತದೆ' ಎಂದು ಹೇಳುವುದರ ಜತೆಗೆ, ತಮ್ಮ ಮಹತ್ವದ ಚಿತ್ರಗಳ ಕೊಲಾಜ್​ ಶೇರ್​ ಮಾಡಿಕೊಂಡಿದ್ದಾರೆ. ಈ ಕೊಲಾಜ್​ನಲ್ಲಿ ಅಮಿತಾಭ್​ ಅಭಿನಯದ 'ಅಭಿಮಾನ್​', 'ದೀವಾರ್​', 'ಜಂಜೀರ್​', 'ಕೂಲಿ', 'ಖುದಾ ಗವಾ', 'ಮೊಹಬ್ಬತೇ', 'ಕಭಿ ಖುಷಿ ಕಭಿ ಘಮ್​', 'ಪೀಕು', 'ಸರ್ಕಾರ್​' ಮುಂತಾದ ಹಲವು ಚಿತ್ರಗಳ ಕೊಲಾಜ್​ ಇದೆ. ಅಮಿತಾಭ್​ ಅವರು 52 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಅಭಿಮಾನಿಗಳು ದೊಡ್ಡ ಮಟ್ಟದಲ್ಲಿ ಸಂಭ್ರಮಿಸುವುದರ ಜತೆಗೆ, ತಮ್ಮ ಮೆಚ್ಚಿನ ನಟನಿಗೆ ಶುಭ ಹಾರೈಸಿದ್ದಾರೆ.

ಕಳೆದ ವರ್ಷ ಬಿಡುಗಡೆಯಾದ 'ಗುಲಾಬೋ ಸಿತಾಬೋ', ಅಮಿತಾಭ್​ ಅಭಿನಯದ ಕೊನೆಯ ಚಿತ್ರವಾಗಿದೆ. 'ಚೆಹ್ರೆ', 'ಮೇ ಡೇ', 'ಬ್ರಹ್ಮಾಸ್ತ್ರ', 'ಜುಂಡ್​' ಮುಂತಾದ ಚಿತ್ರಗಳಲ್ಲಿ ಅವರು ನಟಿಸಿದ್ದು, ಈ ಚಿತ್ರಗಳು ಬಿಡುಗಡೆಯಾಗಬೇಕಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net