ಸಿನಿವಾಣಿ

ಬಾಲಿವುಡ್​ನಲ್ಲಿ ಶುರುವಾಯ್ತು ‘ದಿಯಾ’ ರಿಮೇಕ್ ಕೆಲಸ; ಜನವರಿಯಿಂದ ಶೂಟಿಂಗ್​ ಶುರು

ಬೆಂಗಳೂರು: ಸ್ಯಾಂಡಲ್​ವುಡ್​ನಲ್ಲಿ ಮೋಡಿ ಮಾಡಿದ್ದ ದಿಯಾ ಸಿನಿಮಾ, ಓಟಿಟಿ ವೇದಿಕೆಯಲ್ಲಿ ಹೆಚ್ಚು ಸದ್ದು ಮಾಡಿತ್ತು. ಹಾಗೆ ಸದ್ದು ಮತ್ತು ಸುದ್ದಿ ಮಾಡಿದ್ದ ಸಿನಿಮಾ ಪರಭಾಷಿಕರನ್ನೂ ಸೆಳೆದಿತ್ತು. ಅಷ್ಟೇ ಅಲ್ಲ ಬೇರೆ ಬೇರೆ ಭಾಷೆಗಳಿಗೆ ರಿಮೇಕ್​ ಹಕ್ಕುಗಳನ್ನು ಮಾರಾಟ ಮಾಡಿಕೊಂಡಿತ್ತು. ಅದರಂತೆ ಹಿಂದಿ ರಿಮೇಕ್​ನ ಕೆಲಸಗಳು ಇದೀಗ ಶುರುವಾಗಿವೆ.

ಹೌದು, ಹಿಂದಿಯಲ್ಲಿ ಸಚಿನ್ ಎಂಬುವವರು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಪೂರ್ವ ಕೆಲಸಗಳು ಆರಂಭವಾಗಿದ್ದು, ಜನವರಿಯಲ್ಲಿ ಶೂಟಿಂಗ್​ ಶುರುವಾಗಲಿದೆ. ಲೊಕೇಷನ್​ ಸಹ ಅಂತಿಮವಾಗಿದ್ದು, ಲಖನೌ ಮತ್ತು ಡೆಹ್ರಾಡೂನ್​ನಲ್ಲಿ ಚಿತ್ರೀಕರಣ ಮಾಡಿಕೊಳ್ಳಲಿದೆ. ಹೊಸ ಕಲಾವಿದರಿಗಾಗಿಯೇ ತಂಡ ಹುಡುಕಾಟದಲ್ಲಿದ್ದು, ಶೀಘ್ರದಲ್ಲಿ ಶೀರ್ಷಿಕೆಯನ್ನೂ ಬಹಿರಂಗಪಡಿಸಿಲಿದೆಯಂತೆ.

ಇನ್ನು ಇದರ ಜತೆಗೆ ತೆಲುಗಿನಲ್ಲಿಯೂ ಸಿನಿಮಾ ಕೆಲಸಗಳು ಚುರುಕು ಪಡೆದುಕೊಂಡಿದ್ದು, ಸುಶಾಂತ್ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಮೇಘಾ ಆಕಾಶ್ ನಾಯಕಿಯಾಗಿ ಆಯ್ಕೆಯಾದರೆ, ಮೂಲ ಸಿನಿಮಾದಲ್ಲಿ ನಟಿಸಿದ್ದ ಪವಿತ್ರ ಲೋಕೇಶ್ ತೆಲುಗಿನಲ್ಲಿಯೂ ಮುಂದುವರಿಯಲಿದ್ದಾರೆ.

ಅಶೋಕ್ ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ಚಿತ್ರಕ್ಕೆ ಕೃಷ್ಣ ಚೈತನ್ಯ ಬಂಡವಾಳ ಹೂಡಿದ್ದರು. ಇದೇ ಸಿನಿಮಾದ ತಮಿಳು ಮತ್ತು ಮಲಯಾಳಂ ರಿಮೇಕ್​ ಹಕ್ಕುಗಳೂ ಸಹಿತ ಮಾರಾಟವಾಗಿದ್ದು, ಇನ್ನೇನು ಆ ಸಿನಿಮಾನ ಕೆಲಸಗಳು ಶುರುವಾಗಲಿವೆ.