ಮುಂಬೈ: ಸಿನಿಮಾಗಳಲ್ಲಿ ಬೋಲ್ಡ್ ದೃಶ್ಯಗಳಲ್ಲಿ ನಟಿಸುವುದಕ್ಕೆ ಸಾಮಾನ್ಯವಾಗಿ ನಾಯಕಿಯರು ಹಿಂದೇಟು ಹಾಕೋದು, ಮುಜುಗರ ಪಡುವುದು ಇವೆಲ್ಲ ಸರ್ವೇಸಾಮಾನ್ಯ. ಆದರೆ, ನಾಯಕಿ ಧೈರ್ಯ ತುಂಬಿದರೂ, ನಾಯಕರು ಹಿಂದೇಟು ಹಾಕುವುದು ಬಹಳ ಅಪರೂಪವಿರಬಹುದೇನೋ? ಅಂಥದ್ದೊಂದು ಅಪರೂಪದ ವಿಷಯ 'ಹಸೀನ್ ದಿಲ್ರುಬಾ' ಚಿತ್ರದಲ್ಲಿ ನಡೆದಿದೆಯಂತೆ.
'ಹಸೀನ್ ದಿಲ್ರುಬಾ' ಚಿತ್ರವು ನೆಟ್ಫ್ಲಿಕ್ಸ್ನಲ್ಲಿ ಜುಲೈ 02ರಂದು ಸ್ಟ್ರೀಮ್ ಆಗಲಿದೆ. ಈ ಚಿತ್ರದಲ್ಲಿ ತಾಪ್ಸಿ ಪನ್ನು ಜತೆಗೆ ವಿಕ್ರಾಂತ್ ಮಸ್ಸೆ ಮತ್ತು ಹರ್ಷವರ್ಧನ್ ರಾಣೆ ಸಹ ನಟಿಸಿದ್ದಾರೆ. ಚಿತ್ರದಲ್ಲಿ ಸಾಕಷ್ಟು ಬೋಲ್ಡ್ ದೃಶ್ಯಗಳಿದ್ದು, ಆ ದೃಶ್ಯಗಳಲ್ಲಿ ನಟಿಸುವುದಕ್ಕೆ ಇಬ್ಬರು ಹೀರೋಗಳ ಸಹ ಬಹಳ ಹಿಂದೇಟು ಹಾಕಿದ್ದರು ಎಂದು ತಾಪ್ಸಿ ಹೇಳಿಕೊಂಡಿದ್ದಾರೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, 'ಚಿತ್ರದಲ್ಲಿ ಒಂದಿಷ್ಟು ಬೋಲ್ಡ್ ದೃಶ್ಯಗಳಿವೆ. ವಿಕ್ರಾಂತ್ ಮತ್ತು ಹರ್ಷವರ್ಧನ್ ಇಬ್ಬರ ಜತೆಗೂ ಇಂತಹ ದೃಶ್ಯಗಳಿದ್ದು, ಇಬ್ಬರೂ ನನ್ನ ಹತ್ತಿರ ಬರುವುದಕ್ಕೂ ಹೆದರುತ್ತಿದ್ದರು. ಚಿತ್ರೀಕರಣ ಸಂದರ್ಭದಲ್ಲಿ ಬಹಳ ಮುಜುಗರಕೊಳಗಾಗಿದ್ದ ಇಬ್ಬರೂ, ಟೇಕ್ ಮೇಲೆ ಟೇಕ್ ತೆಗೆದುಕೊಂಡಿದ್ದಾರೆ. ಕೊನೆಗೆ ನಿರ್ದೇಶಕರು ಇಬ್ಬರಿಗೂ ಒಂದಿಷ್ಟು ಅರ್ಥ ಮಾಡಿಸಿದ ಮೇಲೆ, ದೃಶ್ಯಗಳ ಚಿತ್ರೀಕರಣ ಸರಾಗವಾಗಿ ಆಯಿತು' ಎಂದು ತಾಪ್ಸಿ ಹೇಳಿಕೊಂಡಿದ್ದಾರೆ.