ತಮಿಳಿನ ಸ್ಟಾರ್ ನಟ ಅಜಿತ್ ಅವರಿಗಿರುವ ಅಭಿಮಾನಿಗಳನ್ನು ವರ್ಣಿಸಲು ಪದಗಳನ್ನು ಹುಡುಕಬೇಕು. ಇನ್ನು, ಅವರ ಸಿನಿಮಾ ಬಿಡುಗಡೆಯಾಗುತ್ತೆ ಅಂದರೆ ನಟನ ಅಭಿಮಾನಿಗಳಿಗೆ ಅಲ್ಲದೇ ಸಿನಿಪ್ರೇಕ್ಷಕರಿಗೆ, ಸಿನಿ ವಿಮರ್ಶಕರಿಗೆ, ಬೇರೆ ನಟ-ನಟಿಯರ ಅಭಿಮಾನಿಗಳು, ಬೇರೆ ಭಾಷೆಯ ಸಿನಿಪ್ರೇಕ್ಷಕರಿಗೆ ಸಹ ದಿಲ್ ಖುಷ್ ಆಗುತ್ತೆ. ಇನ್ನು, ಅಜಿತ್ ಅವರು ನಟಸಿರುವ 'ವಲಿಮೈ' ಇಂದು ಬಿಡುಗಡೆಯಾಗಿದ್ದು, ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ತೆರೆಮೇಲೆ ಕಂಡು ಫುಲ್ ಖುಷ್ ಆಗಿದ್ದಾರೆ. ಅಂದಹಾಗೆ, ಒಂದು ಸಿನಿಮಾ ಬಿಡುಗಡೆಯ ವೇಳೆ ಸಿನಿತಾರೆಯರ ಅಭಿಮಾನಿಗಳು ಅವರ ಕಟೌಟ್‌ಗಳಿಗೆ ಹಾಲಿನ ಅಭಿಷೇಕ ಮಾಡುವುದು ದಕ್ಷಿಣ ಭಾರತದಲ್ಲಿ ಸಹಜ.
ಹಾಗಾಗಿ, ಸದ್ಯ ಅಜಿತ್ ಅವರ 'ವಲಿಮಾಯಿ' ಬಿಡುಗಡೆಯಾಗಿದ್ದು, ಇದು ಅಭಿಮಾನಿಗಳಿಗೆ ಸಂತಸ ತಂದರೂ, ಹಾಲು ಮಾರಾಟಗಾರರಿಗೆ ಮಾತ್ರ ಎಚ್ಚರಿಕೆಯಂತೆ. ಯಾಕೆ ಅಂತೀರಾ...? 'ವಲಿಮೈ' ರಿಲೀಸ್ ಆಗುತ್ತಿದ್ದಂತೆ ತಮಿಳುನಾಡು ಹಾಲಿನ ಅಸೋಸಿಯೇಷನ್ ಮುಖ್ಯಸ್ಥ ಪೊನ್ನುಸಾಮಿ ಅವರ ಒಂದು ಟ್ವೀಟ್ ಇದೀಗ ಸಖತ್ ವೈರಲ್ ಆಗುತ್ತಿದೆ. ''ವಲಿಮೈ' ರಿಲೀಸ್ ಆಗುತ್ತಿದ್ದಂತೆ ನಟ ಅಜಿತ್ ಅವರ ಕಟೌಟ್‌ಗಳಿಗೆ ಅಭಿಷೇಕ ಮಾಡಲು ಕೆಲವೆಡೆ ಹಾಲು ಕಳ್ಳತನವಾಗುವ ಸಾಧ್ಯತೆ ಇದೆ'', ಎಂದು ಪೊನ್ನುಸಾಮಿ ಟ್ವೀಟ್ ಮಾಡಿದ್ದಾರೆ. ಜತೆಗೆ, ''ಏಜೆಂಟರು ಎಚ್ಚರಿಕೆ ವಹಿಸುಬೇಕು'', ಎಂಬ ಎಚ್ಚರಿಕೆ ನೀಡಿದ್ದಾರೆ ಪೊನ್ನುಸಾಮಿ.
ಅಮೂಲ್ಯವಾದ ಆಹಾರ ಪದಾರ್ಥಗಳು ವ್ಯರ್ಥವಾಗಬಾರದು ಎಂಬ ಕಾರಣಕ್ಕೆ ಕಟೌಟ್‌ಗಳಿಗೆ ಹಾಲಿನ ಅಭಿಷೇಕವನ್ನು ಶಾಶ್ವತವಾಗಿ ನಿಷೇಧಿಸುವಂತೆ ಕೂಡಾ ಪೊನ್ನುಸಾಮಿ ಅವರು ತಮ್ಮ ಟ್ವೀಟ್ನಲ್ಲಿ ತಮಿಳುನಾಡಿನ ಸಿಎಂಗೆ ವಿನಂತಿಸಿದ್ದಾರೆ. ಪೊನ್ನುಸಾಮಿ ಅವರ ಮಾತು ನಿಜವಾಗಿದ್ದರೂ, ಅವರ ಈ ಹೇಳಿಕೆ ಮಾತ್ರ ನಟ ಅಜಿತ್ ಅವರ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ, ಪೊನ್ನುಸಾಮಿ ಅವರ ವಿರುದ್ಧ ಹಲವಾರು ಹ್ಯಾಶ್‌ಟ್ಯಾಗ್‌ಗಳನ್ನು ನಟ ಅಜಿತ್ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಮಾಡುತ್ತಾ, ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.