ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡ ಬೆನ್ನಲ್ಲೇ ಸುಶಾಂತ್ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ ಕುರಿತಾದ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ. ದಿಶಾ ಸತ್ತ ನಂತರವೂ ಆಕೆಯ ಮೊಬೈಲ್ ಕೆಲವು ದಿನಗಳವರೆಗೆ ಕಾರ್ಯನಿರತವಾಗಿತ್ತು ಎಂದು ತಿಳಿದುಬಂದಿದೆ.
ಜೂನ್ 8ರಂದು ನಿಗೂಢ ಸ್ಥಿತಿಯಲ್ಲಿ ದಿಶಾ ಶವ ಪತ್ತೆಯಾಗಿತ್ತು. ತಮ್ಮ ಫ್ಲ್ಯಾಟ್ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಹೇಳಲಾಗಿದೆ. ಆದರೆ ದಿಶಾ ಸತ್ತ ವಾರದ ಬೆನ್ನಲ್ಲೇ ನಟ ಸುಶಾಂತ್ ಸಾವಿಗೀಡಾಗಿದರು. ಹೀಗಾಗಿ ಎರಡು ಪ್ರಕರಣಗಳ ನಡುವೆ ಏನಾದರೂ ಸಂಬಂಧವಿದೆಯೇ ಎಂಬುದು ಸಹಜವಾಗೇ ಅನುಮಾನ ಹುಟ್ಟುಹಾಕಿದೆ. ಹೀಗಾಗಿ ಸುಶಾಂತ್ ಸಾವಿನ ತನಿಖೆಯ ಜತೆಯಲ್ಲೇ ದಿಶಾ ಪ್ರಕರಣದ ಮೇಲೂ ಸಿಬಿಐ ಗಮನಹರಿಸಿದೆ.
ಸದ್ಯ ಮಾಹಿತಿ ಪ್ರಕಾರ ದಿಶಾ ಸತ್ತ ನಂತರವೂ ಆಕೆಯ ಫೋನ್ ಒಂದು ವಾರಕ್ಕಿಂತ ಹೆಚ್ಚಿನ ಕಾಲದವರೆಗೂ ಕಾರ್ಯ ನಿರತವಾಗಿತ್ತೆಂದು ತಿಳಿದುಬಂದಿದೆ. ಜೂನ್ 9 ಮತ್ತು ಜೂನ್ 17ರ ನಡುವೆ ದಿಶಾ ಫೋನ್ನಲ್ಲಿ ಅನೇಕ ಇಂಟರ್ನೆಟ್ ಕರೆಗಳು ದಾಖಲಾಗಿವೆ. ಅಲ್ಲದೆ, ಇಂಟರ್ನೆಟ್ ಸಹ ಬಳಸಲಾಗಿದೆ. ಆದಾಗ್ಯೂ ದಿಶಾ ಫೋನ್ ಅನ್ನು ಯಾರು ಬಳಸಿದ್ದಾರೆ ಎಂಬುದು ಈ ಕ್ಷಣದವರೆಗೂ ಸ್ಪಷ್ಟವಾಗಿಲ್ಲ.
ಇನ್ನು ಪ್ರತ್ಯಕ್ಷದರ್ಶಿ ಹೇಳುವ ಪ್ರಕಾರ ದಿಶಾ ಸಾವಿಗೀಡಾದ ರಾತ್ರಿ ಸ್ಥಳಕ್ಕೆ ಆಗಮಿಸಿದ ಮುಂಬೈ ಪೊಲೀಸರು, ದಿಶಾ ಫೋನನ್ನು ವಶಕ್ಕೆ ಪಡೆಯಲಿಲ್ಲ ಎಂದಿದ್ದಾರೆ. ಇನ್ನೊಂದೆಡೆ ತನಿಖೆಯ ಶಿಷ್ಟಾಚಾರ ಪ್ರಕಾರ ದಿಶಾ ಮರಣ ನಂತರವೂ ಅವರ ಫೋನ್ ಅನ್ನು ಮುಂಬೈ ಪೊಲೀಸರು ಸ್ವಿಚ್ ಆಫ್ ಮಾಡಲಿಲ್ಲ ಎನ್ನಲಾಗಿದೆ.
ಇದೇ ವೇಳೆ ನೆಟ್ಟಿಗರು ಆರೋಪಗಳ ಸುರಿಮಳೆಗೈಯುತ್ತಿದ್ದು, ದಿಶಾ ಸಾವಿನಲ್ಲಿ ಏನೋ ನಿಗೂಢತೆ ಇದೆ. ಇದು ಆತ್ಮಹತ್ಯೆಯಲ್ಲ. ಒಂದೇ ವಾರದ ಅಂತರದಲ್ಲಿ ಸುಶಾಂತ್ ಮತ್ತು ಮಾಜಿ ಮ್ಯಾನೇಜರ್ ಮೃತಪಟ್ಟಿರುವುದರಿಂದ ಇಬ್ಬರ ಸಾವಿಗೂ ಏನೋ ಸಂಬಂಧವಿದೆ ಎಂದು ನೆಟ್ಟಿಗರು ಅನುಮಾನ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)