ಮುಂಬೈ: ಕಳೆದ ಬಾರಿಯ ಕರೊನಾ ಲಾಕ್ಡೌನ್ ವೇಳೆ ಬಾಲಿವುಡ್ನ ಬಹುತೇಕ ಸ್ಟಾರ್ ನಟರು ಮನೆಯಿಂದ ಹೊರಬಂದಿರಲಿಲ್ಲ. ಇದ್ದಲ್ಲಿಂದಲೇ ಕೈಲಾದ ಮಟ್ಟಿಗೆ ಸಹಾಯ ಮಾಡುವುದರಲ್ಲಿ ಹಿಂದೆ ಬಿದ್ದಿರಲಿಲ್ಲ. ಇದೀಗ ಕರೊನಾ ಎರಡನೇ ಅಲೆ ಶುರುವಾಗಿದ್ದೇ ತಡ, ಬಾಲಿವುಡ್ ಮಂದಿ ಬೀದಿಗಿಳಿದು ಸಹಾಯಕ್ಕೆ ಸಿದ್ಧರಾಗುತ್ತಿದ್ದಾರೆ. ಇತ್ತೀಚೆಗಷ್ಟೇ ಕರೊನಾ ವಾರಿಯರ್ಸ್ಗಳಿಗೆ ಸಲ್ಮಾನ್ ಖಾನ್ ಊಟದ ವ್ಯವಸ್ಥೆ ಮಾಡಿದ್ದರು. ಅಕ್ಷಯ್ ಕುಮಾರ್, ಅಜಯ್ ದೇವಗನ್, ಸೋನು ಸೂದ್ ಸೇರಿ ಹಲವರು ಬಗೆಬಗೆ ಕೆಲಸಕ್ಕೆ ಮುಂದಾಗಿದ್ದಾರೆ. ಅದೇ ರೀತಿ ನಟ ಸುನೀಲ್ ಶೆಟ್ಟಿ ಇದೀಗ ಆಕ್ಸಿಜನ್ ಸಿಲಿಂಡರ್ ಪೂರೈಕೆ ಮಾಡುತ್ತಿದ್ದಾರೆ.
ಇದನ್ನೂ ಓದಿ: ಕರೊನಾ ನಡುವೆಯೂ ಚಿತ್ರೀಕರಣ ಮುಂದುವರೆಸಿದ ರಜನಿಕಾಂತ್
ದೇಶದಲ್ಲಿ ಎಲ್ಲೆಡೆ ಆಕ್ಸಿಜನ್ ಕೊರತೆ ಕಾಡುತ್ತಿರುವ ಹಿನ್ನೆಲೆಯಲ್ಲಿ ಸಾಕಷ್ಟು ಬಾಲಿವುಡ್ ಸೆಲೆಬ್ರಿಟಿಗಳು ಸಿಲಿಂಡರ್ ಪೂರೈಕೆ ಜತೆಗೆ ಆಹಾರ ವಿತರಣೆ ಸೇರಿ ಕೋವಿಡ್ ಕೇರ್ ಕೇಂದ್ರಗಳನ್ನು ತೆರೆಯುತ್ತಿದ್ದಾರೆ. ಇದೀಗ ಕೆವಿಎನ್ ಮತ್ತು ಫೀಡ್ ಮೈ ಸಿಟಿ ಎನ್ಜಿಒ ಸಂಸ್ಥೆ ಜತೆಗೆ ಕೈ ಜೋಡಿಸಿರುವ ಸುನೀಲ್ ಶೆಟ್ಟಿ, ಮುಂಬೈ ಮತ್ತು ಬೆಂಗಳೂರಿಗೆ ಆಕ್ಸಿಜನ್ ಸಿಲಿಂಡರ್ ಪೂರೈಕೆ ಮಾಡಲು ಮುಂದಾಗಿದ್ದಾರೆ.
ಈ ಬಗ್ಗೆ ಟ್ವಿಟ್ ಮಾಡಿರುವ ಸುನೀಲ್ ಶೆಟ್ಟಿ, ‘ನಾವೀಗ ಗಂಭೀರ ಕಾಲಘಟ್ಟದಲ್ಲಿದ್ದೇವೆ. ಇಂಥ ವಿಷಮ ಹೊತ್ತಿನಲ್ಲೂ ಸಾಕಷ್ಟು ಜನ ನಮ್ಮ ಜತೆಗೆ ಕೈ ಜೋಡಿಸಿದ್ದಾರೆ. ಫೀಡ್ ಮೈ ಸಿಟಿ ಮತ್ತು ಕೆವಿಎನ್ ಫೌಂಡೇಷನ್ ವತಿಯಿಂದ ಉಚಿತವಾಗಿ ಬಡತನ ರೇಖೆಗಿಂತ ಕೆಳಗಿರುವವರಿಗೆ ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆ ಮಾಡುತ್ತಿದ್ದೇವೆ. ಮಿಷನ್ ಮಿಲಿಯನ್ ಏರ್ ಹೆಸರಿನ ಕಾರ್ಯ ಆರಂಭವಾಗಿದೆ. ಅಗತ್ಯ ಇದ್ದವರು ಸಂಪರ್ಕಿಸಿ ಎಂದೂ ಸುನೀಲ್ ಹೇಳಿದ್ದಾರೆ.