ಈ ವರ್ಷ ಸ್ನೇಹ ದಿನದ ಬಗ್ಗೆ ಒಂದಿಷ್ಟು ಗೊಂದಲಗಳಿವೆ. ಪ್ರಮುಖವಾಗಿ ಈ ಬಾರಿಯ ಅಂತಾರಾಷ್ಟ್ರೀಯ ಸ್ನೇಹ ದಿನವು ಆಗಸ್ಟ್ 2ರಂದು ಭಾರತದಲ್ಲಿ ಆಚರಿಸಲಾಗುತ್ತಿದೆ ಎಂದು ಹೇಳಲಾಗಿದೆ. ಆದರೆ, ಗೂಗಲ್ ಮಾತ್ರ ಇವತ್ತೇ ಸ್ನೇಹ ದಿನದ ಎಂದು ತೋರಿಸುತ್ತಿದೆ.
ಹಾಗಾಗಿ, ಇವತ್ತು ಸ್ನೇಹ ದಿನವನ್ನು ಆಚರಿಸಬೇಕೋ ಬೇಡವೋ ಎಂಬ ವಿಷಯದ ಬಗ್ಗೆ ಹಲವರಲ್ಲಿ ಗೊಂದಲವಿದೆ. ಆದರೂ ಇಂದು ಬೆಳಿಗ್ಗೆಯಿಂದ ಸ್ನೇಹದಿನ ಅಂಗವಾಗಿ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಶುಭಾಶಯಗಳು ಹರಿದಾಡುತ್ತಲೇ ಇದೆ.
ಈಗ ಹಿರಿಯ ನಟಿ ಮತ್ತು ಮಂಡ್ಯಾ ಲೋಕಸಭಾ ಕ್ಷೇತ್ರದ ಸಂಸದೆ ಸುಮಲತಾ ಅಂಬರೀಷ್ ಸಹ ಸ್ನೇಹ ದಿನದ ಶುಭಾಶಯಗಳನ್ನು ಸೋಷಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ. ಇಂದು ಕುಚಿಕು ದಿನ ಎಂದು ಕರೆದಿರುವ ಅವರು, ಅಂರೀಷ್ ತಮ್ಮ ಬಾಳಸಂಗಾತಿಯಷ್ಟೇ ಅಲ್ಲ, ತಮ್ಮ ಬೆಸ್ಟ್ ಫ್ರೆಂಡ್ ಕೂಡಾ ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಕನ್ನಡ ಚಿತ್ರರಂಗದಲ್ಲಿ ಕುಚಿಕೂ ಗೆಳೆಯರು ಎಂದೇ ಗುರುತಿಸಿಕೊಂಡಿರುವ ವಿಷ್ಣುವರ್ಧನ್ ಮತ್ತು ಅಂಬರೀಷ್ ಅವರ ಜತೆಗಿರುವ ತಮ್ಮ ಫೋಟೊವೊಂದನ್ನು ಹಂಚಿಕೊಂಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, 'ಇಂದು ಕುಚಿಕುಗಳ ದಿನ. ಅಂಬಿ ಅಂದರೆ ಸ್ನೇಹ, ಸ್ನೇಹ ಅಂದರೆ ಅಂಬಿ. ನನ್ನ ಬಾಳಸಂಗಾತಿ ಅಲ್ಲದೆ, ನನ್ನ ಬೆಸ್ಟ್ ಫ್ರೆಂಡ್ ಕೂಡ. ಸ್ನೇಹದ ಮೂರ್ತಿಯೇ ಆಗಿದ್ದ ಅಂಬಿ ಅವರ ಕುಚಿಕು ಪ್ರೀತಿ ಯಾವತ್ತಿಗೂ ವಿಶೇಷ. ನನ್ನ ಅಂಬಿ, ಹಾಗೂ ನನ್ನ ಎಲ್ಲ ಸ್ನೇಹಿತರಿಗೂ ಮತ್ತು ಮಂಡ್ಯ ಜನರ ಸ್ನೇಹ, ಪ್ರೀತಿ ವಿಶ್ವಾಸಕ್ಕೆ ಸದಾ ಋಣಿ' ಎಂದು ಅವರು ಹೇಳಿಕೊಂಡಿದ್ದಾರೆ.