ಬೆಂಗಳೂರು: 'ಶುಗರ್ ಫ್ಯಾಕ್ಟರಿ' ಎಂಬ ಚಿತ್ರದಲ್ಲಿ 'ಡಾರ್ಲಿಂಗ್' ಕೃಷ್ಣ ನಟಿಸುತ್ತಾರೆ ಎಂಬ ಸುದ್ದಿ ಕಳೆದ ಮೂರು ತಿಂಗಳುಗಳಿಂದ ಕೇಳಿಬರುತ್ತಲೇ ಇದೆ. ಮೊದಲು ಚಿತ್ರಕ್ಕೆ ಕೃಷ್ಣ ಹೀರೋ ಎಂದಾಯಿತು. ಆ ನಂತರ ಅದ್ವಿತಿ ಶೆಟ್ಟಿ, ಶಿಲ್ಪಾ ಶೆಟ್ಟಿ ಮತ್ತು ಸೊನಾಲ್ ಮಾಂತೆರೊ ನಾಯಕಿಯರಾಗಿ ಆಯ್ಕೆಯಾಗಿದ್ದಾರೆ ಎಂದು ಸುದ್ದಿಯಾಯಿತು.
ಇದನ್ನೂ ಓದಿ: ‘ಟಿಕ್ಟಾಕ್ ಸ್ಟಾರ್’ ಈಗ ‘ಹಾಫ್’ ಚಿತ್ರದ ನಾಯಕಿ!
ಇಷ್ಟೆಲ್ಲಾ ಆದರೂ, ಚಿತ್ರ ಮಾತ್ರ ಪ್ರಾರಂಭವಾಗಿರಲಿಲ್ಲ. ಇತ್ತೀಚೆಗೊಂದು ದಿನ ಬೆಳ್ಳಂಬೆಳಿಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ 'ಶುಗರ್ ಫ್ಯಾಕ್ಟರಿ' ಶುರುವಾಗಿದೆ. ಮಹಾಲಕ್ಷ್ಮೀ ಲೇಔಟ್ನ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ಪ್ರಾರಂಭವಾದ ಈ ಚಿತ್ರದ ಮೊದಲ ದೃಶ್ಯಕ್ಕೆ ತರುಣ್ ಸುಧೀರ್ ಕಿಶೋರ್ ಆರಂಭ ಫಲಕ ತೋರಿದರು. ಜಿ.ಹೆಚ್.ರಾಮಚಂದ್ರ ಅವರು ಕ್ಯಾಮೆರಾ ಚಾಲನೆ ಮಾಡಿದರು.
ಬ್ರಾಹ್ಮಿ ಮುಹೂರ್ತವಾಗಿದ್ದು ಈ ಮುಹೂರ್ತ ಸಮಾರಂಭದಲ್ಲಿ ಹೆಚ್ಚು ಜನ ಇರಲಿಲ್ಲ. ನಟಿ ಅಮೂಲ್ಯ, ಜಗದೀಶ್, 'ಲಾಸ್ಟ್ ಬಸ್' ಅರವಿಂದ್, ಮಯೂರ್ ಪಟೇಲ್ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
ನಟಿ ಅಮೂಲ್ಯ ಅವರ ಸಹೋದರ ದೀಪಕ್ ಅರಸ್ ಕಥೆ ಭರೆದು ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಕೃಷ್ಣ ಮತ್ತು ಮೂವರು ನಾಯಕಿಯರ ಜತೆಗೆ ರಂಗಾಯಣ ರಘು, ಗೋವಿಂದೇಗೌಡ, ಸೂರಜ್ ಕುಮಾರ್, ಪವನ್ ಎಸ್ ನಾರಾಯಣ್, ನೀತೂ ರಾಯ್ ಮುಂತಾದವರು ನಟಿಸುತ್ತಿದ್ದಾರೆ. ಬಾಲಮಣಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಗಿರೀಶ್. ಆರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಇದನ್ನೂ ಓದಿ: ‘ಶಂಭೋ ಶಿವ ಶಂಕರ’ರ ಜತೆಗೆ ರಾಜಸ್ತಾನಿ ಬೆಡಗಿ ಸ್ಟೆಪ್
ಕಬೀರ್ ರಫಿ ಸಂಗೀತ ಮತ್ತು ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಇರುವ ಈ ಚಿತ್ರದ ಮೊದಲ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ಈಗಾಗಲೇ ಪ್ರಾರಂಭವಾಗಿದೆ.