ಬೆಂಗಳೂರು: ನಟ ದರ್ಶನ್ ಮತ್ತು ಸುದೀಪ್ ತಮ್ಮ ನಡುವಿನ ಮುನಿಸು ಮರೆತು ಮತ್ತೆ ಒಂದಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ನಿನ್ನೆ ರಾತ್ರಿ ನಡೆದ ಸುಮಲತಾ ಅಂಬರೀಷ್ ಹುಟ್ಟುಹಬ್ಬದ ಪಾರ್ಟಿಯಲ್ಲಿ ಇಬ್ಬರು ಒಟ್ಟಾಗಿ ಕಾಣಿಸಕೊಂಡಿದ್ದಾರೆ. ಸುಮಲತಾ ಅವರೇ ನೇತೃತ್ವ ವಹಿಸಿ ಸಂಧಾನ ಮಾಡಿಸಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ.
ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವುದರ ನಡುವೆಯೇ ಅಭಿಮಾನಿಗಳು ಕುಣಿದು ಕುಪ್ಪಳಿಸುವಂತಹ ಸುದ್ದಿಯೊಂದು ಹೊರಬಿದ್ದಿದೆ. ಏನಪ್ಪಾ ಆ ಸುದ್ದಿಯೆಂದರೆ, ದಚ್ಚು-ಕಿಚ್ಚನ ಜುಗಲ್ಬಂಧಿಯಲ್ಲಿ ಅದ್ಧೂರಿ ಸಿನಿಮಾವೊಂದು ತೆರೆಗೆ ಅಪ್ಪಳಿಸಲಿದೆಯಂತೆ.
ಇದು ನಿಜಾನಾ ಎಂದು ನೀವು ಹುಬ್ಬೇರಿಸಬಹುದು. ನಿಜ ಎನ್ನುತ್ತಿವೆ ಸ್ಯಾಂಡಲ್ವುಡ್ನ ಕೆಲವು ಮೂಲಗಳು. ಅಂಬರೀಷ್-ವಿಷ್ಣುವರ್ಧನ್ ನಟನೆಯ ಸೂಪರ್ ಹಿಟ್ ಸಿನಿಮಾ ದಿಗ್ಗಜರು ಬಗ್ಗೆ ನಿಮಗೆಲ್ಲ ಗೊತ್ತೇ ಇದೆ. ಈ ಸಿನಿಮಾ ಸ್ಯಾಂಡಲ್ವುಡ್ನಲ್ಲಿ ಭಾರೀ ಸಂಚಲನವನ್ನೇ ಸೃಷ್ಟಿ ಮಾಡಿತ್ತು. ಇದೀಗ ಇದೇ ಹೆಸರಿನಲ್ಲಿ ಮತ್ತೊಂದು ಸಿನಿಮಾ ಮೂಡಿಬರಲಿದೆಯಂತೆ. ಈ ಸಿನಿಮಾದಲ್ಲಿ ದಚ್ಚು-ಕಿಚ್ಚ ಅಭಿನಯಿಸಲಿದ್ದಾರಂತೆ.
ಇದೊಂದು ಪ್ಯಾನ್ ಇಂಡಿಯಾ ಸಿನಿಮಾ ಆಗಿರಲಿದೆ ಎಂದು ಸಿನಿ ಮೂಲಗಳು ತಿಳಿಸಿವೆ. ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ಈ ಅದ್ದೂರಿ ಪ್ಯಾನ್ ಇಂಡಿಯಾ ಸಿನಿಮಾ ಮೂಡಿಬರಲಿದೆ ಎಂದು ಹೇಳಲಾಗುತ್ತಿದೆ. ಇದೀಗ ಈ ಸಿನಿಮಾ ಸುದ್ದಿ ಸಿನಿ ವಲಯದಲ್ಲಿ ಬಿರುಗಾಳಿ ಎಬ್ಬಿಸಿದೆ.
ಸ್ನೇಹ ಸೇತುವೆಗೆ ಸಂಸದೆ ಸುಮಲತಾ ಅವರು ಮತ್ತೆ ಚೈತನ್ಯ ತುಂಬಿದ್ದಾರೆ. ಎಲ್ಲ ಕುತೂಹಲಗಳಿಗೂ ಸದ್ಯದಲ್ಲೆ ತೆರೆ ಬೀಳಲಿದೆ ಎನ್ನಲಾಗುತ್ತಿದೆ. ಎಲ್ಲೆಲ್ಲೂ ಇದೇ ಸುದ್ದಿ ಚರ್ಚೆಯಾಗುತ್ತಿದೆ. ಇದು ನಿಜವಾದರೆ ಸಾಕು ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ಇದರ ಬಗ್ಗೆಯೇ ಚರ್ಚೆ ಜೋರಾಗಿದೆ. ಸುದೀಪ್ ಮತ್ತು ದರ್ಶನ್ ಹೆಸರು ಎಕ್ಷ್ನಲ್ಲಿ ಟ್ರೆಂಡ್ ಆಗಿದೆ. (ದಿಗ್ವಿಜಯ ನ್ಯೂಸ್)