ಕುಚಿಕು ಗೆಳೆಯರ ಮನಸ್ತಾಪಕ್ಕೆ ಬ್ರೇಕ್​! ಸಿಕ್ಕೇ ಬಿಡ್ತು ಕಿಚ್ಚ-ದಚ್ಚು ಮತ್ತೆ ಒಂದಾಗುವ ಮುನ್ಸೂಚನೆ

Darshan and Sudeep
Published on

ಬೆಂಗಳೂರು: ಸ್ಯಾಂಡಲ್​ವುಡ್​ನಲ್ಲಿ ಒಂದು ಕಾಲದಲ್ಲಿ ಸ್ನೇಹಿತರಾಗಿ ಮಿಂಚಿದ್ದ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಮತ್ತು ಕಿಚ್ಚ ಸುದೀಪ್​ ದೂರಾಗಿ ವರ್ಷಗಳೇ ಕಳೆಯಿತು. ಆದರೂ ಸಹ ಇಬ್ಬರ ಅಭಿಮಾನಿಗಳು ಯಾವಾಗ ಒಂದಾಗ್ತಾರೆ ಎಂದು ಕಾಯುತ್ತಿರುವ ನಡುವೆಯೇ ಒಂದು ಆಶಾದಾಯಕ ಬೆಳವಣಿಗೆ ಸ್ಯಾಂಡಲ್​ವುಡ್​ ಅಂಗಳದಲ್ಲಿ ನಡೆದಿದೆ.

ಹೌದು, ದರ್ಶನ್​ ಮತ್ತು ಸುದೀಪ್​ ಒಂದೇ ಸ್ಥಳದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇಷ್ಟು ನಾನೆಲ್ಲೂ-ನೀನೆಲ್ಲೂ ಅಂತಿದ್ದ ಇಬ್ಬರು ಹಲವು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಒಂದೇ ಸ್ಥಳದಲ್ಲಿ ಒಟ್ಟಿಗೆ ಕಾಣಿಸಿಕೊಂಡಿರುವುದು ಇಬ್ಬರ ಅಭಿಮಾನಿಗಳ ಖುಷಿಗೆ ಪಾರವೇ ಇಲ್ಲದಂತಾಗಿದೆ. ಶೀಘ್ರದಲ್ಲೇ ಇಬ್ಬರು ಮತ್ತೆ ಒಂದಾಗುವ ಲಕ್ಷಣಗಳು ಗೋಚರಿಸುತ್ತಿವೆ ಎಂಬ ಚರ್ಚೆಗಳು ಸಹ ಆರಂಭವಾಗಿದೆ.

ಒಂದೇ ಸ್ಥಳದಲ್ಲಿ ಕಿಚ್ಚ-ದಚ್ಚು

ಇಂದು ಸುಮಲತಾ ಅಂಬರೀಷ್​ ಅವರ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ನಿನ್ನೆ ಚಿತ್ರರಂಗದವರಿಗಾಗಿ ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಇದಕ್ಕೆ ಸುದೀಪ್​ಗೂ ಸಹ ಆಹ್ವಾನವನ್ನು ನೀಡಲಾಗಿತ್ತು. ದರ್ಶನ್​ ಸಹ ಪಾರ್ಟಿಗೆ ಆಗಮಿಸಿದ್ದರು. ಅನೇಕ ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ದರ್ಶನ್​ ಮತ್ತು ಸುದೀಪ್​ ಒಂದೇ ಸ್ಥಳದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

Sudeep and Darshan

ಎಲ್ಲಿಯೂ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ

ಯಾವುದೇ ಕಾರ್ಯಕ್ರಮದಲ್ಲೂ ಅಥವಾ ಮದುವೆ, ಸಮಾರಂಭಗಳಲ್ಲೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿರಲಿಲ್ಲ. ಅಂಬರೀಷ್​ ನಿಧನರಾದಾಗಲೂ ಇಬ್ಬರು ಎಲ್ಲಿಯೂ ಒಟ್ಟಿಗೆ ಕಾಣಿಸಿಕೊಳ್ಳಲಿಲ್ಲ. ಅಲ್ಲದೆ, ಅಭಿಷೇಕ್​ ಅಂಬರೀಷ್​ ಮದುವೆ ಸಂದರ್ಭದಲ್ಲೂ ಒಟ್ಟಿಗೆ ಕಾಣಿಸಿಕೊಳ್ಳಲಿಲ್ಲ. ಯಾವುದೇ ಕಾರ್ಯಾಕ್ರಮಗಳಲ್ಲೂ ಸುದೀಪ್​ ಬಂದು ಹೋದ ಬಳಿಕ ದರ್ಶನ್​ ಅಥವಾ ದರ್ಶನ್​ ಬಂದು ಹೋದ ಬಳಿಕ ಸುದೀಪ್​ ಬರುತ್ತಿದ್ದರು. ಇಬ್ಬರ ನಡೆಯಿಂದ ಅಭಿಮಾನಿಗಳಿಗೆ ಬೇಸರವಾಗುತ್ತಿತ್ತು. ಇಬ್ಬರು ಮತ್ತೆ ಒಂದಾಗಬೇಕು ಅಂತಾ ಆಗಾಗ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಸಹ ನಡೆಸಿದ್ದಾರೆ.

ಸುದೀಪ್​ ಟ್ವೀಟ್​

ಇದರ ನಡುವೆ ಕ್ರಾಂತಿ ಸಿನಿಮಾ ಪ್ರಚಾರದ ಸಂದರ್ಭದಲ್ಲಿ ದರ್ಶನ್​ ಅವರ ಮೇಲೆ ಚಪ್ಪಲಿ ಎಸೆತ ಪ್ರಕರಣದ ವೇಳೆ ಸುದೀಪ್​ ಪ್ರತಿಕ್ರಿಯೆ ನೀಡಿದ್ದರು. ಘಟನೆಯನ್ನು ಖಂಡಿಸಿದ್ದರು. ಇದಕ್ಕೆ ದರ್ಶನ್​ ಸಹ ಧನ್ಯವಾದ ತಿಳಿಸಿದ್ದರು. ಇದು ಕೂಡ ಇಬ್ಬರ ನಡುವೆ ಮನಸ್ತಾಪ ಕರಗಿದೆ ಎಂಬುದರ ಸೂಚನೆ ನೀಡಿತು. ಆಗಲೂ ಅಭಿಮಾನಿಗಳು ತುಂಬಾ ಖುಷಿಯಾಗಿದ್ದರು. ಅಂದಿನಿಂದಲೂ ಅಭಿಮಾನಿಗಳಲ್ಲಿ ಇಬ್ಬರು ಮತ್ತೆ ಒಂದಾಗುವ ಆಶಾ ಭಾವನೆ ಇದೆ.

Sudeep and Darshan 1

ಸುಮಲತಾ ಸಂಧಾನ

ಇದೀಗ ಇಬ್ಬರು ಒಂದೇ ಸ್ಥಳದಲ್ಲಿ ಒಟ್ಟಿಗೆ ಕಾಣಿಸಿಕೊಂಡಿರುವುದು ಅಭಿಮಾನಿಗಳಲ್ಲಿ ಖುಷಿ ಇಮ್ಮಡಿಯಾಗಿದೆ. ಇಬ್ಬರು ಮತ್ತೆ ಒಂದಾಗುತ್ತಾರೆ ಎಂಬ ಆಸೆ ಮತ್ತೆ ಬಲವಾಗಿ ಚಿಗುರಿದೆ. ಇದರ ನಡುವೆ ಸುಮಲತಾ ಅಂಬರೀಷ್​ ಅವರು ತಾವೇ ಮುಂದೆ ನಿಂತು ದರ್ಶನ್​ ಮತ್ತು ಸುದೀಪ್​ ನಡುವೆ ಸಂಧಾನ ಮಾಡಿಸಲಿದ್ದಾರೆ ಎಂಬ ಮಾತುಗಳು ಸಹ ಕೇಳಿಬರುತ್ತಿದೆ. ರಾಕ್​ಲೈನ್​ ವೆಂಕಟೇಶ್​, ಸುಮಲತಾ ಅಂಬರೀಷ್​ ಸುದೀಪ್​ ಮತ್ತು ದರ್ಶನ್​ ಇಬ್ಬರನ್ನು ಮತ್ತೆ ಒಂದು ಮಾಡಲಿದ್ದಾರೆ ಎನ್ನಲಾಗುತ್ತದೆ. ಅದಕ್ಕೆ ಪುಷ್ಠಿ ನೀಡುವಂತೆ ನಿನ್ನೆ ರಾತ್ರಿ ಸುಮಲತಾ ಅಂಬರೀಷ್​ ಬರ್ತಡೇಯಲ್ಲಿ ಕಿಚ್ಚ-ದಚ್ಚು ಒಟ್ಟಿಗೆ ಕಾಣಿಸಿಕೊಂಡಿರುವುದು ಬಹಳ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಅಲ್ಲದೆ, ಅಭಿಮಾನಿಗಳಲ್ಲೂ ಆಸೆ ಚಿಗುರಿದೆ.

ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ವಿಡಿಯೋವನ್ನು ಶೇರ್​ ಮಾಡಿಕೊಂಡು ಕಿಚ್ಚ-ದಚ್ಚು ಮತ್ತೆ ಒಂದಾಗಬೇಕು ಎಂದು ಆಗ್ರಹಿಸುತ್ತಿದ್ದಾರೆ. ನಿಮ್ಮನ್ನು ಒಟ್ಟಿಗೆ ನೋಡಲು ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ.

Darshan and Sudeep 2

2017ರ ದರ್ಶನ್​ ಟ್ವೀಟ್​

2017ರಲ್ಲಿ ದರ್ಶನ್​ ಟ್ವೀಟ್​ ಮಾಡಿ, ನಾನು ಮತ್ತು ಸುದೀಪ್​ ಇನ್ಮುಂದೆ ಸ್ನೇಹಿತರಲ್ಲ. ನಾವಿಬ್ಬರು ಕನ್ನಡ ಇಂಡಸ್ಟ್ರಿಗೆ ದುಡಿಯುವ ನಟರಷ್ಟೆ. ಈ ಬಗ್ಗೆ ಯಾವುದೇ ವದಂತಿ ಹರಡಬೇಡಿ. ಇದು ಇಲ್ಲಿಗೆ ಮುಗಿಯಲಿ ಎಂದಿದ್ದರು. ಈ ಒಂದು ಟ್ವೀಟ್​ ಇಡೀ ಕರ್ನಾಟಕದಾದ್ಯಂತ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಅನೇಕರಿಗೆ ಸಿಡಿಲು ಬಡಿದಂತಾಯಿತು. ಅಷ್ಟು ಚೆನ್ನಾಗಿದ್ದ ಇಬ್ಬರ ನಡುವೆ ಏನು ನಡೆಯಿತು ಎಂಬ ಪ್ರಶ್ನೆ ಇಂದಿಗೂ ಅನೇಕರ ಮನದಲ್ಲಿ ಇಂದಿಗೂ ಉಳಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net