ಕಳೆದ ವಾರ ಮುಜರ್‌ಪುರ ರೈಲ್ವೇ ಸ್ಟೇಷನ್‌ನಲ್ಲಿ ಒಬ್ಬ ಮಹಿಳೆ ತೀರಿಕೊಂಡಿದ್ದು, ಅದು ಗೊತ್ತಿಲ್ಲದ ಆಕೆಯ ಮಗು ಆಕೆಯನ್ನು ಎಬ್ಬಿಸುವುದಕ್ಕೆ ಪ್ರಯತ್ನಿಸಿದ್ದು ಗೊತ್ತು ತಾನೇ? ಈ ಘಟನೆಯ ವಿಡಿಯೋ ಮತ್ತು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದ್ದಷ್ಟೇ ಅಲ್ಲ, ಹಲವರ ಕಣ್ಣಲ್ಲಿ ನೀರು ತರಿಸಿತ್ತು. ಈ ಹೃದಯ ವಿದ್ರಾವಕ ಘಟನೆಯು ಹಲವರನ್ನು ತಲ್ಲಣಗೊಳಿಸಿತ್ತು.
ಇದನ್ನೂ ಓದಿ: Video: ಯಶ್ ಮಕ್ಕಳ ಆಟ ನೋಡಿ!
ಈಗ್ಯಾಕೆ ಈ ವಿಷಯವೆಂದರೆ, ಘಟನೆ ಬಗ್ಗೆ ಗೊತ್ತಾಗುತ್ತಿದ್ದಂತೆಯೇ, ಶಾರೂಖ್ ಖಾನ್ ಅವರ ಮೀರ್ ಫೌಂಡೇಶನ್ ತಕ್ಷಣವೇ ಆ ಮಗುವಿನ ಕುಟುಂಬವನ್ನು ಸಂಪರ್ಕಿಸುವುದರ ಜತೆಗೆ, ಆ ಕುಟುಂಬಕ್ಕೆ ಸಾಕಷ್ಟು ಸಹಾಯ ಮಾಡಿದೆ. ಈ ವಿಷಯವಾಗಿ ಶಾರೂಖ್ ಖಾನ್ ಮತ್ತು ಮೀರ್ ಫೌಂಡೇಶನ್ ಟ್ವೀಟ್ ಮಾಡಿ, ಆ ಮಗು ತಾತ-ಅಜ್ಜಿಯ ಜತೆಗಿರುವ ಒಂದು ಫೋಟೋ ಶೇರ್ ಮಾಡಿದ್ದಾರೆ. ಅಷ್ಟೇ ಅಲ್ಲ, ಮಗುವನ್ನು ಮನೆಗೆ ತಲುಪಿಸುವುದಕ್ಕೆ ಸಹಾಯ ಮಾಡಿದವರೆಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.
ಇಷ್ಟಕ್ಕೂ ಶಾರೂಖ್ ಖಾನ್, ಈ ಘಟನೆಗೆ ಸ್ಪಂದಿಸಿದರು ಎಂದರೆ, ಅದಕ್ಕೂ ಕಾರಣವಿದೆ. ಶಾರೂಖ್ ತಮ್ಮ ತಂದೆಯನ್ನು ಚಿಕ್ಕಂದಿನಲ್ಲೇ ಕಳೆದುಕೊಂಡಿದ್ದರು. ಇನ್ನು ಅವರ ತಾಯಿ ನಿಧನರಾಗಿ 30 ವರ್ಷಗಳಾಗಿವೆಯಂತೆ. ತಂದೆ-ತಾಯಿ ಕಳೆದುಕೊಂಡವರ ಕಷ್ಟ ತನಗೆ ಗೊತ್ತು ಎನ್ನುವ ಶಾರೂಖ್, ಅದೇ ಕಾರಣಕ್ಕೆ ಮಗುವಿನ ಸಹಾಯಕ್ಕೆ ಬಂದರಂತೆ.
ಇದನ್ನೂ ಓದಿ: ರವಿಚಂದ್ರನ್ ಜತೆಗೆ ಗಿರಿರಾಜ್ ಸಿನಿಮಾ
ಈ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ‘ನಾನು ನನ್ನ ತಂದೆ-ತಾಯಿಯ ಜತೆಗೆ ಹೆಚ್ಚು ಸಮಯ ಕಳೆಯಲಿಲ್ಲ ಎಂಬ ಬೇಸರ ಬಹಳ ಇದೆ. ಆ ಕೊರಗು ನನ್ನ ಮಕ್ಕಳಿಗೂ ಕಾಡಬಾರದು ಎಂಬ ಕಾರಣಕ್ಕೆ ನಾನು ಅವರ ಜತೆಗೆ ಸಾಕಷ್ಟು ಸಮಯವನ್ನು ಕಳೆಯುತ್ತೇನೆ. ಅವರ ಜತೆಗೇ ಓದುತ್ತೇನೆ, ಅವರ ಪಕ್ಕದಲ್ಲೇ ಮಲಗುತ್ತೇನೆ, ಅವರ ಯಾವುದೇ ಸಮಸ್ಯೆಗಳಿಗೂ ಸ್ಪಂದಿಸುತ್ತೇನೆ’ ಎಂದು ಶಾರೂಖ್ ಹೇಳಿಕೊಂಡಿದ್ದರು.