ಸಿನಿವಾಣಿ

‘ಶ್ರೀರಂಗ’ ಚಿತ್ರದ ಟ್ರೇಲರ್ ಬಿಡುಗಡೆ … ಜುಲೈ 22ಕ್ಕೆ ಸಿನಿಮಾ ತೆರೆಗೆ

chetannadiger

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಬ್ಯಾಕ್​ ಟು ಬ್ಯಾಕ್ ಚಿತ್ರಗಳನ್ನು ನಿರ್ದೇಶಿಸುತ್ತಿರುವವರು ವೆಂಕಟ್​ ಭಾರದ್ವಾಜ್​. 'ಎ ಡೇ ಇನ್​ ದಿ ಸಿಟಿ' ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಿರ್ದೇಶಕರಾಗಿ ಎಂಟ್ರಿ ಕೊಟ್ಟ ಹಿರಿಯ ಚಿತ್ರಸಾಹಿತಿ ಮತ್ತು ನಿರ್ದೇಶಕ ಸಿ.ವಿ. ಶಿವಶಂಕರ್​ ಅವರ ಮಗ ವೆಂಕಟ್​, ನಂತರದ ವರ್ಷಗಳಲ್ಲಿ 'ಬಬ್ಲೂಷ', 'ಕೆಂಪಿರ್ವೆ', 'ಪೇಂಟರ್​' ಮುಂತಾದ ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಈಗ ಸದ್ದಿಲ್ಲದೆ ಅವರು 'ಶ್ರೀರಂಗ' ಎಂಬ ಚಿತ್ರವನ್ನು ನಿರ್ದೇಶಿಸಿದ್ದು, ಇತ್ತೀಚೆಗೆ ಆ ಚಿತ್ರದ ಟ್ರೇಲರ್​ ಬಿಡುಗಡೆಯಾಗಿದೆ.

ಪದ್ಮಶ್ರೀ ಪುರಸ್ಕೃತ ಮಂಜಮ್ಮ ಜೋಗತಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮಾ. ಹರೀಶ್​ ಇತ್ತೀಚೆಗೆ ಚಿತ್ರದ ಟ್ರೇಲರ್​ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಟ್ರೇಲರ್ ಬಿಡುಗಡೆ ಬಳಿಕ ಮಾತನಾಡಿದ ನಿರ್ದೇಶಕ ವೆಂಟಕ್ ಭಾರಧ್ವಾಜ್, 'ಸಿನಿಮಾ ಅನ್ನೋದನ್ನು ಒಬ್ಬರ ಕೈಯಲ್ಲಿ ಮಾಡಲು ಆಗುವುದಿಲ್ಲ. ತಾಂತ್ರಿಕ ವರ್ಗ, ಕಲಾವಿದರು ಹೀಗೆ ಎಲ್ಲರೂ ಕೂಡಿದಾಗ ಮಾತ್ರ ಸಿನಿಮಾಗುತ್ತದೆ. ಶಂಕರ್ ರಾಮನ್ ಡೈಲಾಗ್ ಅದ್ಭುತವಾಗಿದೆ. ಚಿಕ್ಕ ಪಾತ್ರದಿಂದ ಹಿಡಿದು ದೊಡ್ಡ ಪಾತ್ರದವರೆಗೂ ಎಲ್ಲರೂ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ನಾನು ಒಂದು ಪಾತ್ರ ಮಾಡಿದ್ದೇನೆ. ಇದೇ 22ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ' ಎಂದು ಮಾಹಿತಿ ಕೊಟ್ಟರು.

ವೆಂಕಟ್ ಭಾರದ್ವಾಜ್ ಚಿತ್ರಕಥೆ ಬರೆದು ನಿರ್ದೇಶನ ಮಾಡುವುದರ ಜತೆಗೆ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. ನಾಯಕನಾಗಿ ಶಿನವ್, ನಾಯಕಿಯರಾಗಿ ರಚನಾ ರಾಯ್, ರೂಪ ರಾಯಪ್ಪ ಹಾಗೂ ವಂದನಾ ಶೆಟ್ಟಿ ನಟಿಸಿದ್ದು, ಉಳಿದಂತೆ ಗುರುರಾಜ್ ಹೊಸಕೋಟೆ, ಯಮುನಾ ಶ್ರೀನಿಧಿ, ಸಾಗರ್ ಜಯರಾಮ್, ಚಿಪ್ಸ್ ಬಾಬು, ಗಿರೀಶ್, ಮಣಿ ಮಾರನ್ ಅಭಿನಯಿಸಿದ್ದಾರೆ.

ಮಿಥುನ್ ಛಾಯಾಗ್ರಾಹಣ, ಸಮೀರ್ ಕುಲಕರ್ಣಿ ಸಂಗೀತ ಇರುವ ಈ ಚಿತ್ರಕ್ಕೆ ಕನ್ನಡದ ಟಾಪ್ ರ್ಯಾಪರ್​ ವಿರಾಜ್​ ಕನ್ನಡಿಗ, ಅವಿನಾಶ್ ಛೆಬ್ಬಿ, ಚೈತ್ರಾ ನಾಣಯ್ಯ ಹಾಡಿದ್ದಾರೆ. ಋತು ಕ್ರಿಯೇಷನ್ಸ್​ನಡಿ ಸುಮಾ ಸಿ.ಆರ್. ಈ ಚಿತ್ರವನ್ನು ನಿರ್ಮಿಸಿದ್ದಾರೆ.