ಬೆಂಗಳೂರು: 'ನೆನಪಿರಲಿ' ಪ್ರೇಮ್ ಮಗಳು ಅಮೃತಾ ಪ್ರೇಮ್, 'ಟಗರು ಪಲ್ಯ' ಎಂಬ ಚಿತ್ರದ ಮೂಲಕ ಎಂಟ್ರಿ ಕೊಟ್ಟಿದ್ದು, ನಾಗಭೂಷಣ್ಗೆ ನಾಯಕಿಯಾಗಿ ನಟಿಸುತ್ತಿರುವುದು ಗೊತ್ತೇ ಇದೆ. ಈಗಾಗಲೇ ಚಿತ್ರದ ಶೂಟಿಂಗ್ ಸಹ ಸದ್ದಿಲ್ಲದೆ ನಡೆಯುತ್ತಿದೆ. ಆದರೆ, ಈ ಚಿತ್ರದಲ್ಲಿ ಅಮೃತಾ ಹೇಗೆ ಕಾಣಿಸುತ್ತಾರೆ ಎಂದು ಚಿತ್ರತಂಡದವರು ಬಹಿರಂಗಗೊಳಿಸಿರಲಿಲ್ಲ.
ಈಗ ಚಿತ್ರತಂಡದವರು ಅಮೃತಾ ಅವರ ಮೊದಲ ಲುಕ್ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಅದಕ್ಕೆ ಕಾರಣವೂ ಇದೆ. ಇಂದು ಅಮೃತಾ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಆಕೆಗೆ ಶುಭ ಕೋರುವುದರ ಜತೆಗೆ, ಮೊದಲ ಪೋಸ್ಟರ್ ಸಹ ಬಿಡುಗಡೆ ಮಾಡಲಾಗಿದೆ. ಇದುವರೆಗೂ ಪ್ರೇಮ್ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರು ಅಭಿನಯಿಸುತ್ತಿರುವ ಚಿತ್ರತಂಡಗಳು ಅವರಿಗೆ ಪೋಸ್ಟರ್ಗಳ ಮೂಲಕ ವಿಶ್ ಮಾಡುತ್ತಿದ್ದವು. ಈಗ ಮೊದಲ ಬಾರಿಗೆ ಅವರ ಮಗಳ ಚಿತ್ರಕ್ಕೆ ಶುಭ ಕೋರಿ ಪೋಸ್ಟರ್ ಬಿಡುಗಡೆಯಾಗಿದೆ.
‘ಟಗರು ಪಲ್ಯ’ ಚಿತ್ರದಲ್ಲಿ ಅಮೃತ ಪ್ರೇಮ್ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡು, ಬಣ್ಣ ಹಚ್ಚಿದ್ದಾರೆ. ಮಂಡ್ಯ ಭಾಗದ ಕಥೆಯನ್ನೊಳ್ಳಗೊಂಡ ಈ ಚಿತ್ರದಲ್ಲಿ ಅಲ್ಲಿನ ಸೊಗಡಿನ ಭಾಷೆ ಕಲಿತು ಅಭಿನಯಿಸಿದ್ದಾರೆ. ಅಮೃತಾ ಅಭಿನಯದ ಬಗ್ಗೆ ಮಾತನಾಡುವ ನಿರ್ದೇಶಕ ಉಮೇಶ್ ಕೆ ಕೃಪ, 'ಹಳ್ಳಿ ಹುಡುಗಿ ಪಾತ್ರ ಅಂದ್ರೆ ಸುಲಭದ ವಿಷಯವಲ್ಲ. ಅದಕ್ಕೆ ಆದಷ್ಟು ಬೇಗ ಒಗ್ಗಿಕೊಂಡು ಆ ನಯ ನಾಜೂಕನ್ನು ಬಹಳ ಬೇಗ ಅರ್ಥಮಾಡಿಕೊಂಡು ಅಮೃತಾ ನಟಿಸಿದ್ದಾರೆ. ಭಾಷೆ ಮೇಲೆ ಅವರಿಗೆ ಹಿಡಿತ ಇದೆ. ಮಂಡ್ಯ ಸ್ಲ್ಯಾಂಗ್ ತುಂಬಾ ಚೆನ್ನಾಗಿ ಮಾತನಾಡಿದ್ದಾರೆ. ಈಗಾಗಲೇ ಎರಡು ಹಂಗಳ ಚಿತ್ರೀಕರಣ ಮುಗಿದಿದೆ' ಎಂದು ಮಾಹಿತಿ ಕೊಡುತ್ತಾರೆ.
ಡಾಲಿ ಪಿಕ್ಚರ್ಸ್ನಡಿ ಧನಂಜಯ್ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ತಾರಾ, ಶರತ್ ಲೋಹಿತಾಶ್ವ, ರಂಗಾಯಣ ರಘು ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಾಸುಕಿ ವೈಭವ್ ಸಂಗೀತ, ಎಸ್. ಕೆ. ರಾವ್ ಛಾಯಾಗ್ರಹಣ ಈ ಚಿತ್ರಕ್ಕಿದೆ.