ಸಿನಿವಾಣಿ

ದೀಪಾವಳಿಗೆ ಸೂರ್ಯವಂಶಿ; ಕ್ರಿಸ್ಮಸ್​ಗೆ 83

ಒಂದು ಕಡೆ ಮುಂದಿನ ಕೆಲವು ತಿಂಗಳಲ್ಲಿ ಏಳು ದೊಡ್ಡ ಸಿನಿಮಾಗಳು ಓವರ್​ ದಿ ಟಾಪ್​ (ಓಟಿಟಿ)ಗಳಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜಾಗುತ್ತಿವೆ. ದೊಡ್ಡ ಚಿತ್ರಗಳೆಲ್ಲಾ ಓಟಿಟಿಗಳಲ್ಲಿ ಬಿಡುಗಡೆಯಾದರೆ ಚಿತ್ರಮಂದಿರಗಳ ಗತಿ ಏನು ಎಂದು ಚಿತ್ರಮಂದಿರಗಳೆಲ್ಲಾ ಮಾಲೀಕರು ತಲೆಯ ಮೇಲೆ ಕೈಹೊತ್ತು ಕುಳಿತಿರುವಾಗಲೇ, ಒಂದಿಷ್ಟು ಚಿತ್ರಗಳು, ಸ್ವಲ್ಪ ನಿಧಾನವಾದರೂ ಚಿತ್ರಮಂದಿರಗಳಲ್ಲೇ ಬಿಡುಗಡೆಯಾಗುವ ಭರವಸೆ ನೀಡಿವೆ.

ಸದ್ಯಕ್ಕೆ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿಲ್ಲ. ದೇಶದಲ್ಲಿ ಕರೊನಾ ಕೇಸ್​ಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ, ಯಾವಾಗಿನಿಂದ ಚಿತ್ರ ಪ್ರದರ್ಶನ ಪ್ರಾರಂಭವಾಗುತ್ತದೆ ಎಂಬ ವಿಷಯದಲ್ಲಿ ಯಾರಿಗೂ ಸ್ಪಷ್ಟತೆ ಇಲ್ಲ. ಆದರೂ ಕೆಲವು ಚಿತ್ರಗಳನ್ನು ಚಿತ್ರಮಂದಿರಗಳಲ್ಲೇ ಬಿಡುಗಡೆ ಮಾಡಬೇಕೆಂದು, ಆ ಚಿತ್ರದ ನಿರ್ಮಾಪಕರು ಮತ್ತು ನಿರ್ದೇಶಕರು ನಿರ್ಧರಿಸಿದ್ದಾರೆ.

ಪ್ರಮುಖವಾಗಿ ಅಕ್ಷಯ್​ ಕುಮಾರ್ ಅಭಿನಯದ 'ಸೂರ್ಯವಂಶಿ' ಮತ್ತು ರಣವೀರ್​ ಸಿಂಗ್​ ಅಭಿನಯದ '83' ಚಿತ್ರತಂಡಗಳು, ಸ್ವಲ್ಪ ನಿಧಾನವಾದರೂ ಚಿತ್ರಮಂದಿರಗಳಲ್ಲೇ ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡುವುದಕ್ಕೆ ಯೋಚಿಸಿವೆ ಮತ್ತು ಅದರ ಪ್ರಕಾರ ತಯಾರಿಗಳನ್ನು ನಡೆಸುತ್ತಿವೆ. ಒಂದು ಪಕ್ಷ, ಮುಂದಿನ ಎರಡ್ಮೂರು ತಿಂಗಳುಗಳಲ್ಲಿ ಎಲ್ಲವೂ ಸರಿ ಹೋಗಿ, ಚಿತ್ರಮಂದಿರಗಳಲ್ಲಿ ಪ್ರದರ್ಶನ ಮಾಡುವುದಕ್ಕೆ ಅನುಮತಿ ಸಿಕ್ಕರೆ, ದೀಪಾವಳಿ ಸೀಸನ್​ನಲ್ಲಿ ಮೊದಲು 'ಸೂರ್ಯವಂಶಿ' ಬಿಡುಗಡೆಯಾಗಲಿದೆ. ಅದಾಗಿ ಒಂದು ತಿಂಗಳಿಗೇ, ಕ್ರಿಸ್ಮಸ್​ ಹಬ್ಬದ ಸಂದರ್ಭದಲ್ಲಿ '83' ಚಿತ್ರ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

'ಸೂರ್ಯವಂಶಿ' ಚಿತ್ರವು ಒಬ್ಬ ವೀರ ಪೊಲೀಸ್​ನ ಕಥೆಯಾಗಿದ್ದು, ಅಕ್ಷಯ್​ ಕುಮಾರ್​ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಅಜಯ್​ ದೇವಗನ್​ ಮತ್ತು ರಣವೀರ್ ಸಿಂಗ್​ ಸಹ ಅತಿಥಿ ಪಾತ್ರಗಳಲ್ಲಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು 1983ರಲ್ಲಿ ಭಾರತ ಕ್ರಿಕೆಟ್​ ವಿಶ್ವಕಪ್​ ಗೆದ್ದ ಕಥೆ ಹೊಂದಿರುವ '83' ಚಿತ್ರದಲ್ಲಿ ರಣವೀರ್​ ಸಿಂಗ್​, ದೀಪಿಕಾ ಪಡುಕೋಣೆ ಮುಂತಾದವರು ನಟಿಸಿದ್ದಾರೆ.