ಲಾಕ್ಡೌನ್ ಪ್ರಾರಂಭವಾದಾಗಿನಿಂದಲೂ, ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವ ಏಕೈಕ ಬಾಲಿವುಡ್ ನಟ ಎಂದರೆ ಅದು ಸೋನು ಸೂದ್. ವಲಸೆ ಕಾರ್ಮಿಕರಿಗೆ ಮೊದಲು ಊಟದ ವ್ಯವಸ್ಥೆ ಮಾಡಿದರು. ನಂತರ ಅವರನ್ನು ಅವರ ಊರುಗಳಿಗೆ ಕಳುಹಿಸಿಕೊಟ್ಟರು. ಆಪ್ ಶುರು ಮಾಡಿ ಕೆಲಸವಿಲ್ಲದವರಿಗೂ ನೆರವಾದರು.
ಹೀಗೆ ಒಂದಲ್ಲಾ ಒಂದು ರೀತಿಯಲ್ಲಿ ಸತತವಾಗಿ ಸಹಾಯ ಮಾಡುತ್ತಲೇ ಇದ್ದಾರೆ ಸೋನು. ವಿಶೇಷವೆಂದರೆ, ಅವರು ಯಾರಿಂದಲೂ ಚಂದಾ ಎತ್ತಿಲ್ಲ ಅಥವಾ ಬೇರೆಯವರ ಸಹಾಯ ಕೇಳಿಲ್ಲ. ತಾವು ದುಡಿದ ಹಣದಲ್ಲಿ, ಬೇರೆಯವರಿಗೆ ನೆರವು ನೀಡುತ್ತಾ ಬಂದಿದ್ದಾರೆ.
ಇಷ್ಟಕ್ಕೂ ಈ ಸಮಯದಲ್ಲಿ ಸೋನು ಸೂದ್ ಅವರು ಖರ್ಚು ಮಾಡಿದ ಹಣವೆಷ್ಟು ಎಂಬ ಪ್ರಶ್ನೆ ಬರುವುದು ಸಹಜ. ಅದೆಲ್ಲಕ್ಕಿಂತ ಹೆಚ್ಚಾಗಿ, ಇಷ್ಟೊಂದು ಖರ್ಚು ಮಾಡುತ್ತಿರಬೇಕಾದರೆ, ಸೋನು ಸೂದ್ ಅವರ ಆಸ್ತಿ ಮೌಲ್ಯ ಅದೆಷ್ಟಿರಬಹುದು ಎಂಬ ಪ್ರಶ್ನೆ ಬರುವುದು ಸಹ ಸಹಜ.
ಮೂಲಗಳ ಪ್ರಕಾರ, ಸೋನು ಅವರ ಆಸ್ತಿ ಮೌಲ್ಯ 130 ಕೋಟಿ ರೂಪಾಯಿಗಂತೆ. 20 ವರ್ಷಗಳ ಹಿಂದೆ, ಮುಂಬೈಗೆ ನಟನಾಗಬೇಕು ಎಂಬ ಮಹತ್ವಾಕಾಂಕ್ಷೆಯಿಂದ ಬಂದ ಸೋನು, ಆ ನಂತರ ಬಾಲಿವುಡ್ನ ಬೇಡಿಕೆಯ ವಿಲನ್ ಆದರು. ಕೋಟಿ-ಕೋಟಿ ಹಣವನ್ನು ಸಂಪಾದಿಸಿದರು. ಒಂದು ಚಿತ್ರಕ್ಕೆ ಏನಿಲ್ಲವೆಂದರೂ ಎರಡು ಕೋಟಿ ಸಂಭಾವನೆ ಪಡೆಯುವ ಸೋನು, ತಾವು ದುಡಿದ ಹಣವನ್ನು ಹೋಟೆಲ್ ಸೇರಿದಂತೆ ಹಲವು ವ್ಯವಹಾರಗಳಲ್ಲಿ ತೊಡಗಿಸಿದ್ದಾರೆ.
ಅದೆಲ್ಲದರಿಂದ, ಅವರ ಒಟ್ಟು ಆಸ್ತಿ ಮೌಲ್ಯ 130 ಕೋಟಿಯಷ್ಟಾಗಿದೆ ಎಂದು ಹೇಳಲಾಗುತ್ತಿದೆ. ಈ ಪೈಕಿ, ಲಾಕ್ಡೌನ್ ಸಮಯದಲ್ಲಿ ಅವರು ಸುಮಾರು 10 ಕೋಟಿ ರೂಪಾಯಿಗಳನ್ನು ವಿವಿಧ ಕೆಲಸಗಳಿಗೆ ಖರ್ಚು ಮಾಡಿದ್ದಾರಂತೆ.
ಬಹಳಷ್ಟು ಸೆಲೆಬ್ರಿಟಿಗಳು ಒಂದಿಷ್ಟು ಕೊಟ್ಟು ಕೈತೊಳೆದುಕೊಂಡ ಸಂದರ್ಭದಲ್ಲಿ, ಖರ್ಚು ಮಾಡುವುದರ ಜತೆಗೆ ಬೀದಿಗಿಳಿದು ಕೆಲಸ ಮಾಡಿದ ಸೋನು ಬಗ್ಗೆ ಇಡೀ ದೇಶವೇ ಕೊಂಡಾಡುತ್ತಿದೆ.