ಸಿನಿವಾಣಿ

ಪುಸ್ತಕ ರೂಪದಲ್ಲಿ ಬರಲಿದೆ ಸೋನು ಲಾಕ್‌ಡೌನ್ ಅನುಭವಗಳು ...

ಲಾಕ್‌ಡೌನ್ ಸಂದರ್ಭದಲ್ಲಿ ಸೆಲೆಬ್ರಿಟಿಗಳೆಲ್ಲಾ ಮನೆಯಲ್ಲಿ ಕುಟುಂಬದವರ ಜತೆಗೆ ಆರಾಮವಾಗಿ ಕಳೆದರೆ, ಸೋನು ಸೂದ್ ಮಾತ್ರ ವಲಸಿಗರಿಗೆ ಆಶ್ರಯ ಕಲ್ಪಿಸುವುದರಲ್ಲಿ, ಅವರನ್ನು ತಮ್ಮ ಊರುಗಳಿಗೆ ಕಳುಹಿಸಿದವುರಲ್ಲಿ ತೊಡಗಿಸಿಕೊಂಡಿದ್ದರು. ಈಗ ಆ ಎಲ್ಲಾ ಅನುಭವಗಳನ್ನು ಒಟ್ಟು ಮಾಡಿ ಪುಸ್ತಕ ರೂಪದಲ್ಲಿ ಹೊರತರುವುದಕ್ಕೆ ಸಜ್ಜಾಗಿದ್ದಾರೆ.

ಈಗಾಗಲೇ ಸೋನು ಬರವಣಿಗೆ ಶುರು ಮಾಡಿದ್ದು, ವರ್ಷಾಂತ್ಯದಲ್ಲಿ ಪುಸ್ತಕ ಹೊರಬರುವ ಸಾಧ್ಯತೆ ಇದೆ. ಪೆಂಗ್ವಿನ್ ರ‌್ಯಾಂಡಮ್ ಹೌಸ್ ಸಂಸ್ಥೆಯು ಈ ಪುಸ್ತಕವನ್ನು ಹೊರತರುತ್ತಿದೆ.

ಈ ಪುಸ್ತಕವನ್ನು ಯಾಕೆ ಬರೆಯಬೇಕು ಅಂತ ತಮಗನಿಸಿತು ಎಂದು ಖುದ್ದು ಸೋನು ಹೇಳಿಕೊಂಡಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ‘ಲಾಕ್‌ಡೌನ್ ಆರಂಭವಾದ ಹೊಸದರಲ್ಲಿ ಹಲವರಿಗೆ ಊಟ ಹಂಚುತ್ತಿದ್ದೆವು. ಈ ಸಂದರ್ಭದಲ್ಲಿ 350 ಜನ ಕಾರ್ಮಿಕರು ಬಂದು, 10 ದಿನಗಳಿಗಾಗುವಷ್ಟು ಊಟ ಕಟ್ಟಿಕೊಡುವುದಕ್ಕೆ ಸಾಧ್ಯವಾ ಎಂದು ಕೇಳಿದರು. ಕಾರಣ ಕೇಳಿದಾಗ, ಅವರೆಲ್ಲಾ ಕರ್ನಾಟಕದಲ್ಲಿನ ತಮ್ಮ ತವರೂರಿಗೆ ನಡೆದುಕೊಂಡು ಹೊರಟಿರುವ ವಿಷಯ ಗೊತ್ತಾಯಿತು. ಮುಂಬೈನಿಂದ ಅಲ್ಲಿಗೆ ಹೋಗುವುದಕ್ಕೆ 10 ದಿನಗಳಾದರೂ ಬೇಕು.

ಅದೇ ಕಾರಣಕ್ಕೆ 10 ದಿನಗಳಿಗಾಗುವಷ್ಟು ಊಟ ಬೇಕು ಎಂದು ಅವರು ಹುಡುಕುತ್ತಿದ್ದರು. ಈ ವಿಷಯ ಕೇಳಿ ನಿಜಕ್ಕೂ ನೋವಾಯಿತು. ಅಲ್ಲಿಯವರೆಗೂ ವಲಸಿಗರಿಗೆ ಊಟದ ವ್ಯವಸ್ಥೆ ಮಾಡುತ್ತಿದ್ದೆವು. ಆ ನಂತರ ಅವರನ್ನು ತಮ್ಮ ಊರುಗಳಿಗೆ ಸುರಕ್ಷಿತವಾಗಿ ಕಳಿಸಿಕೊಡುವ ಪ್ರಯತ್ನ ಮಾಡಿದೆವು’ ಎಂದು ಹೇಳಿಕೊಂಡಿದ್ದಾರೆ ಸೋನು.

ಈ ತರಹ ಅವರಿಗೆ ಸಾಕಷ್ಟು ಅನುಭವಗಳಾಗಿವೆಯಂತೆ. ಅವನ್ನೆಲ್ಲಾ ನಾಲ್ಕು ಜನರಿಗೆ ತಲುಪಿಸುವ ಉದ್ದೇಶದಿಂದ ಅವರು ಪುಸ್ತಕ ಬರೆಯುವುದಕ್ಕೆ ತಯಾರಿ ನಡೆಸಿದ್ದಾರೆ. ಸದ್ಯಕ್ಕೆ ಅವರಿನ್ನೂ ಈ ಪುಸ್ತಕಕ್ಕೆ ಹೆಸರಿಟ್ಟಿಲ್ಲ. ವರ್ಷದ ಕೊನೆಗೆ ಈ ಪುಸ್ತಕದ ಬಗ್ಗೆ ಇನ್ನಷ್ಟು ಬೆಳಕು ಚೆಲ್ಲುವುದಾಗಿ ಅವರು ಹೇಳುತ್ತಾರೆ.