ಮುಂಬೈ: ಕರೊನಾದಿಂದ ಸಂಕಷ್ಟಕ್ಕೆ ಒಳಗಾದವರ ಪೈಕಿ ಗಟ್ಟಿಯಾಗಿ ನಿಂತವರು ಬಾಲಿವುಡ್ ನಟ ಸೋನು ಸೂದ್. ಕಳೆದ ವರ್ಷ ಕರೊನಾ ಮೊದಲ ಅಲೆಯಿಂದ ಲಾಕ್ಡೌನ್ ಘೋಷಣೆಯಾದಾಗ ರಸ್ತೆಗಿಳಿದ ಸೋನು, ಅಲ್ಲಿಂದ ಇಲ್ಲಿಯವರೆಗೂ ತಮ್ಮದೇ ರೀತಿ ಸಾವಿರಾರು ಜನರಿಗೆ ಸಹಾಯ ಮಾಡುತ್ತಲೇ ಬಂದಿದ್ದಾರೆ.
ಸೋನು ಅವರ ಈ ಸಾಮಾಜಿಕ ಕಳಿಕಳಿ ನೋಡಿ, ಅವರರಿಗೆ ಭಾರತ ರತ್ನ ಕೊಡಬೇಕು, ಅವರನ್ನು ರಾಷ್ಟ್ರಪತಿ ಮಾಡಬೇಕು, ಪ್ರಧಾನ ಮಂತ್ರಿಯನ್ನಾಗಿಸಬೇಕು ಎಂದು ಸೋಷಿಯಲ್ ಮೀಡಿಯಾದಲ್ಲಿ ಹಲವರು ಅಭಿಪ್ರಾಯ ವ್ಯಕ್ತಪಡಿಸುತ್ತಲೇ ಇರುತ್ತಾರೆ. ಇತ್ತೀಚೆಗೆ, ನಟಿ ರಾಖಿ ಸಾವಂತ್ ಸಹ ಕರೊನಾ ಅಟ್ಟಹಾಸವನ್ನು ಮಟ್ಟಹಾಕುವುದಕ್ಕೆ ಸೋನು ಸೂದ್ ಅಥವಾ ಸಲ್ಮಾನ್ ಖಾನ್ ಅವರನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಈ ವಿಷಯವಾಗಿ ಇತ್ತೀಚೆಗೆ ಮುಂಬೈನಲ್ಲಿ ಕೆಲವು ಪಾಪರಾಜಿಗಳು ಸೋನು ಅವರ ಅಭಿಪ್ರಾಯ ಕೇಳಿದಾಗ, ತನಗೆ ಸಾಮಾನ್ಯ ಮನುಷ್ಯನಾಗಿರುವುದಕ್ಕೆ ಹೆಚ್ಚು ಇಷ್ಟ, ಯಾವುದೇ ಹುದ್ದೆ ಇಷ್ಟ ಇಲ್ಲ ಎಂದು ಸೋನು ಸೂದ್ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಹಾಲಿಡೇ ಮೂಡ್ನಲ್ಲಿ ಬಾಲಿವುಡ್ನ ಹಿರಿಯ ನಟಿಯರು …
ಇನ್ನು, ದೇಶದ ಹಲವು ರಾಜ್ಯಗಳಲ್ಲಿ ಆಕ್ಸಿಜನ್ನ ಅಭಾವದಿಂದ ಹಾಹಾಕಾರ ಎದ್ದಿರುವ ಹಿನ್ನೆಲೆಯಲ್ಲಿ, ಅಪಾರ ಹಾನಿಗೊಳಗಾದ ರಾಜ್ಯಗಳಲ್ಲಿ ಕನಿಷ್ಠ ನಾಲ್ಕು ಆಮ್ಲಜನಕ ಸ್ಥಾವರಗಳನ್ನು ಸ್ಥಾಪಿಸಲು ಸೋನು ಸೂದ್ ಉದ್ದೇಶಿಸಿದ್ದು, ಈಗಾಗಲೇ ಫ್ರಾನ್ಸ್ ದೇಶದಿಂದ ಮೊದಲ ಸ್ಥಾವರವನ್ನು ಆಮದು ಮಾಡಿಕೊಳ್ಳುತ್ತಿದ್ದಾರೆ.