ಸಿನಿವಾಣಿ

ನೂರು ಮೊಬೈಲ್​ಗಳನ್ನು ಉಡುಗೊರೆಯಾಗಿ ಕೊಟ್ಟ ಸೋನು ಸೂದ್​

ಹೈದರಾಬಾದ್​​: ಕಳೆದ ವರ್ಷದ ಆಗಸ್ಟ್​ನಲ್ಲಿ ಆನ್​ಲೈನ್​ ಕ್ಲಾಸ್​ಗಳು ಶುರುವಾದ ಸಂದರ್ಭದಲ್ಲಿ ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತ ಮೊಬೈಲ್​ ಫೋನ್​​ಗಳನ್ನು ಕೊಟ್ಟಿದ್ದರು ಬಾಲಿವುಡ್​ ನಟ ಸೋನು ಸೂದ್​. ಇದೀಗ ಅವರು ಮತ್ತೊಮ್ಮೆ ನೂರು ಸ್ಮಾರ್ಟ್​ಫೋನ್​ಗಳನ್ನು ಉಚಿತವಾಗಿ ಕೊಟ್ಟಿದ್ದಾರೆ.

'ಮೆಗಾಸ್ಟಾರ್​' ಚಿರಂಜೀವಿ ಅಭಿನಯದ 'ಆಚಾರ್ಯ' ಎಂಬ ತೆಲುಗು ಚಿತ್ರದಲ್ಲಿ ಸೋನು ಒಂದು ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವುದು ಗೊತ್ತಿರಬಹುದು. ಹೈದರಾಬಾದ್​ನ ಕೊಕಾಪೇಟ್​ನಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಚಿತ್ರತಂಡದಲ್ಲಿ ಕೆಲಸ ಮಾಡುತ್ತಿರುವ ನೂರಕ್ಕೂ ಹೆಚ್ಚು ಕಾರ್ಮಿಕರಿಗೆ ಸೋನು ಉಚಿತ ಮೊಬೈಲ್​ ಫೋನ್​ಗಳನ್ನು ಕೊಟ್ಟಿದ್ದಾರೆ.

'ಆಚಾರ್ಯ' ಚಿತ್ರದಲ್ಲಿ ಕೆಲಸ ಮಾಡುತ್ತಿರುವ ಹಲವು ದಿನಗೂಲಿ ನೌಕರರ ಬಳಿ ಸ್ಮಾರ್ಟ್​ಫೋನ್​ಗಳಿಲ್ಲ ಎಂಬುದು ಸೋನುಗೆ ಗೊತ್ತಾಗಿದೆ. ಅಷ್ಟೇ ಅಲ್ಲ, ಆ ಕಾರ್ಮಿಕರ ಮಕ್ಕಳಿಗೆ ಸ್ಮಾರ್ಟ್​ಫೋನ್​ ಇಲ್ಲದೆ ಆನ್​ಲೈನ್​ ಶಿಕ್ಷಣ ಪಡೆಯುವುದಕ್ಕೆ ಕಷ್ಟಪಡುತ್ತಿದ್ದಾರೆ ಎಂಬ ವಿಷಯ ಕಿವಿಗೆ ಬಿದ್ದಿದೆ. ತಕ್ಷಣವೇ ನೂರು ಮೊಬೈಲ್​ಫೋನ್​ಗಳನ್ನು ಆರ್ಡರ್​ ಮಾಡಿದ ಸೋನು, ಅದನ್ನೆಲ್ಲಾ ಇತ್ತೀಚೆಗೆ ಚಿತ್ರದಲ್ಲಿ ಕೆಲಸ ಮಾಡಿರುವ ಕಾರ್ಮಿಕರಿಗೆ ಉಡುಗೊರೆಯಾಗಿ ನೀಡಿದ್ದಾರೆ.

ಈ ವಿಷಯದ ಬಗ್ಗೆ ಗೊತ್ತಿಲ್ಲದ ಕಾರ್ಮಿಕರಿಗೆ, ಸೋನು ಕರೆಯುತ್ತಿದ್ದಾರಂತೆ ಎಂದು ಗೊತ್ತಾದಾಗ ಆಶ್ಚರ್ಯವಾಯಿತಂತೆ. ಕೊನೆಗೆ ಹೋಗಿ ಭೇಟಿಯಾದಾಗ, ಸ್ಮಾರ್ಟ್​ಫೋನ್​ಗಳನ್ನು ಹಂಚುತ್ತಿರುವ ವಿಷಯ ಗೊತ್ತಾಗಿದೆ. ಮೊಬೈಲ್​ ಪಡೆದ ಕಾರ್ಮಿಕರು, ಸೋನು ಅವರನ್ನು ಮನಸಾರೆ ಹರಿಸಿ-ಹಾರೈಸಿ ಕಳುಹಿಸಿದ್ದಾರೆ ಎಂದು ಹೇಳಲಾಗುತ್ತಿದೆ.