ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಿಧನರಾಗಿ ಮೂರು ತಿಂಗಳಾಗಿವೆ. ಈ ಮೂರು ತಿಂಗಳಲ್ಲಿ ಅವರ ಹೆಸರಿನಲ್ಲೇ ಏನೇನೋ ಬೆಳವಣಿಗೆಗಳಾಗಿವೆ. ಬಹುಶಃ ಅವರು ಬದುಕಿದ್ದರೆ, ಈ ಎಲ್ಲಾ ಸರ್ಕಸ್ ನೋಡಿ ಅವರು ಖಂಡಿತಾ ನಗುತ್ತಿದ್ದರು ಎಂದು ಸೋನು ಸೂದ್ ಅಭಿಪ್ರಾಯಪಟ್ಟಿದ್ದಾರೆ.
ಸುಶಾಂತ್ ಸಾವಿನ ಬಗ್ಗೆ ಸೋನು ಮಾತನಾಡುತ್ತಿರುವುದು ಇದು ಮೊದಲೇನಲ್ಲ. ಎರಡು ತಿಂಗಳುಗಳ ಹಿಂದೆ ಅವರು ಮೊದಲ ಬಾರಿಗೆ ಮಾತನಾಡಿದ್ದರು. ಸುಶಾಂತ್ ಹೆಸರು ಬಳಸಿಕೊಂಡು ಬೇರೆಯವರು ಹೆಸರು ಮಾಡುತ್ತಿದ್ದಾರೆ ಎಂದು ಕಂಗನಾ ರಣಾವತ್ ಹೆಸರು ತೆಗೆದುಕೊಳ್ಳದೆಯೇ ಹೇಳಿದ್ದರು.
ಈಗ ಸೋನು, ಮತ್ತೊಮ್ಮೆ ಸುಶಾಂತ್ ಸಿಂಗ್ ಬಗ್ಗೆ ಮಾತನಾಡಿದ್ದಾರೆ. ಈ ಕುರಿತು ಸಂದರ್ಶನ ನೀಡಿರುವ ಅವರು, ಸುಶಾಂತ್ ಬಗ್ಗೆ ಗೊತ್ತಿಲ್ಲದವರು, ಅವರನ್ನು ಜೀವನದಲ್ಲಿ ಒಮ್ಮೆ ಸಹ ನೋಡದಿರುವವರೆಲ್ಲಾ ಅವರ ಪರವಾಗಿ ಮಾತನಾಡುತ್ತಿರುವುದು ನೋಡಿ ತಮಗೆ ಆಶ್ಚರ್ಯವಾಗುತ್ತಿದೆ ಎಂದಿದ್ದಾರೆ.
'ಎಷ್ಟೋ ಜನ ಪಬ್ಲಿಸಿಟಿಗಾಗಿ ಸುಶಾಂತ್ ಹೆಸರಿನಲ್ಲಿ ಪ್ರಚಾರ ಪಡೆಯುತ್ತಿದ್ದಾರೆ. ಸುಶಾಂತ್ ಬಗ್ಗೆ ಗೊತ್ತಿಲ್ಲದವರೆಲ್ಲಾ, ಅವರ ಪರವಾಗಿ ಮಾತನಾಡಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಬಹುಶಃ ಸುಶಾಂತ್ ಬದುಕಿದ್ದರೆ, ತಮ್ಮ ಹೆಸರಿನಲ್ಲಿ ಆಗುತ್ತಿರುವ ಇಷ್ಟೆಲ್ಲಾ ಸರ್ಕಸ್ ನೋಡಿ ಖಂಡಿತಾ ನಗುತ್ತಿದ್ದರು' ಎಂದು ಸೋನು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ತಮ್ಮ ಹಾಗೂ ಸುಶಾಂತ್ ಗೆಳೆತನದ ಬಗ್ಗೆ ಮಾತನಾಡಿರುವ ಅವರು, 'ನಾನು ಮತ್ತು ಸುಶಾಂತ್ ಹಲವು ಬಾರಿ ಭೇಟಿಯಾಗಿದ್ದೇವೆ. ಜಿಮ್ನಲ್ಲಿ ಒಟ್ಟಿಗೇ ವರ್ಕೌಟ್ ಮಾಡಿದ್ದೇವೆ. ಸುಶಾಂತ್ ಹೊರಗಿನವರಾದರೂ, ಇಲ್ಲಿ ಸಾಕಷ್ಟು ಸಾಧನೆ ಮಾಡಿದ್ದರು. ಆದರೆ, ಬೇರೆಲ್ಲಾ ವಿಚಾರಗಳ ಮಧ್ಯೆ ಅವೆಲ್ಲಾ ಮರೆತುಹೋಗುವುದಕ್ಕೆ ಪ್ರಾರಂಭವಾಗಿದೆ. ಇದೆಲ್ಲಾ ನೋಡುತ್ತಿದ್ದರೆ ನಿಜಕ್ಕೂ ಬೇಸರವಾಗುತ್ತದೆ' ಎಂದು ಸೋನು ಹೇಳಿಕೊಂಡಿದ್ದಾರೆ.