ಸಿನಿವಾಣಿ

ಒಂದೇ ಹಾಡು.. ನಾಲ್ವರು ಗಾಯಕರು... ‘ಮಹಾನುಭಾವ’ನಾಗಿ ಮಿಂಚಲಿರುವ ಡಾ. ಪುನೀತ್ ರಾಜ್​ಕುಮಾರ್!

ಪವರ್ ಸ್ಟಾರ್ ನಟ ಪುನೀತ್ ರಾಜ್​ಕುಮಾರ್ ಅವರು ನಮ್ಮನ್ನು ಅಗಲಿರಬಹುದು. ಆದರೆ, ಅವರು ತಮ್ಮ ಸಿನಿಮಾಗಳ ಮೂಲಕ, ವ್ಯಕ್ತಿತ್ವದ ಮೂಲಕ ಎಂದೆಂದಿಗೂ ಜೀವಂತವಾಗಿರುತ್ತಾರೆ ಎಂಬುದು ಸತ್ಯ. ಇನ್ನು, ಅಪ್ಪು ಅವರ ನಿಧನದ ಬಳಿಕ ಅನೇಕರು ರಾಜಕುಮಾರನಿಗೆ ಗಾನನಮನ ಸಲ್ಲಿಸಿದ್ದಾರೆ. ಆದರೆ, ಇದೀಗ ನಿರ್ದೇಶಕ ಕಾಂತ ಕನ್ನಲ್ಲಿ ಮತ್ತು ಸಂಗೀತ ನಿರ್ದೇಶಕ ಶ್ರೀಧರ್ ವಿ. ಸಂಭ್ರಮ್ ಅವರು ಅಪ್ಪು ಅವರನ್ನು ಕುರಿತು ಒಂದು ಹೊಸ ಹಾಡು ಮಾಡಿದ್ದಾರೆ. ಹೌದು, ಪುನೀತ್ ಅವರ ವ್ಯಕ್ತಿತ್ವವನ್ನು ಕೊಂಡಾಡುವ ಹಾಗೂ ಎಲ್ಲರಿಗೂ ಸ್ಫೂರ್ತಿ ಆಗುವಂತಹ ರೀತಿಯಲ್ಲಿ ಪುನೀತ್ ಅವರ ಈ ವಿಶೇಷ ಹಾಡು ಮೂಡಿಬಂದಿದೆ ಎಂದು ಕಾಂತ ಕನ್ನಲ್ಲಿ ತಿಳಿಸಿದ್ದಾರೆ.
ಅಂದಹಾಗೆ, ಈ ಹಾಡಿಗೆ ‘ಮಹಾನುಭಾವ’ ಎಂದು ಟೈಟಲ್ ಕೊಡಲಾಗಿದೆ. ವಿಶೇಷ ಏನೆಂದರೆ, ಖ್ಯಾತ ಗಾಯಕರಾದ ವಿಜಯ್ ಪ್ರಕಾಶ್, ಸೋನು ನಿಗಮ್, ಕೈಲಾಶ್ ಖೇರ್ ಹಾಗೂ ಶಂಕರ್ ಮಹದೇವನ್​ ಅವರು ಜೊತೆಯಾಗಿ ಅಂದರೆ ನಾಲ್ವರು ಗಾಯಕರು ಈ ಹಾಡಿಗೆ ತಮ್ಮ ಧ್ವನಿ ನೀಡಿದ್ದಾರೆ. ನಿರ್ದೇಶಕ ಕಾಂತ ಕನ್ನಲ್ಲಿ ಅವರು ಬರೆದಿರುವ ಸಾಹಿತ್ಯಕ್ಕೆ ಈ ನಾಲ್ವರು ಖ್ಯಾತ ಗಾಯಕರು ಜೀವ ತುಂಬಿದ್ದಾರೆ ಎನ್ನಲಾಗಿದೆ. ಇನ್ನು, ಮಾ.15 ರಂದು ‘ಮಹಾನುಭಾವ’ ಹಾಡು ರಿಲೀಸ್ ಆಗಲಿದೆ. ನಿರ್ದೇಶಕ ಕಾಂತ ಕನ್ನಲ್ಲಿ ಅವರು ಬರೆದಿರುವ ಹಾಡಾಗಿರುವುದರಿಂದ ಹಾಗೂ ನಾಲ್ವರು ಗಾಯಕರು ಹಾಡಿರುವುದರಿಂದ ಈ ಸಾಂಗ್​ನ ಮೇಲೆ ಅಪ್ಪು ಅಭಿಮಾನಿಗಳ ನಿರೀಕ್ಷೆಗಳು ಹೆಚ್ಚಾಗಿವೆ.