ಸಿನಿವಾಣಿ

ಗರ್ಭಿಣಿ ಸೋನಮ್ ಕಪೂರ್ ಮನೆಯಲ್ಲಿ 1.41 ಕೋಟಿ ರೂಪಾಯಿ ಆಭರಣಗಳ ಕಳ್ಳತನ!

ದೆಹಲಿ: ಬಾಲಿವುಡ್ ನಟಿ ಸೋನಮ್ ಕಪೂರ್ ಶೀಘ್ರದಲ್ಲೇ ತಮ್ಮ ಮೊದಲ ಮಗುವನ್ನು ಸ್ವಾಗತಿಸಲಿದ್ದಾರೆ. ನಟಿ ಕಳೆದ ತಿಂಗಳು ಈ ಸಂತೋಷದ ಸುದ್ದಿಯನ್ನು ಹಂಚಿಕೊಂಡಿದ್ದು, ಇದನ್ನು ಕೇಳಿದ ಅಭಿಮಾನಿಗಳು ಅವರಿಗೆ ಶುಭಕೋರಿದ್ದಾರೆ. ಕಳೆದ ವಾರವೇ ನಟಿ ಒಂದು ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದು, ನಟಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಈ ಮಧ್ಯೆ, ನಟಿ ಸೋನಮ್ ಕಪೂರ್ ಮತ್ತು ಅವರ ಪತಿಯ ನವದೆಹಲಿಯ ನಿವಾಸವನ್ನು ದರೋಡೆ ಮಾಡಲಾಗಿದೆ ಎಂಬ ಸುದ್ದಿಗಳು ಕೇಳಿಬಂದಿವೆ. ಹೌದು, ನಟಿಯ ಮನೆಯಲ್ಲಿ 1.41 ಕೋಟಿ ರೂಪಾಯಿ ಮೌಲ್ಯದ ನಗದು ಮತ್ತು ಚಿನ್ನಾಭರಣ ದೋಚಲಾಗಿದೆಯಂತೆ. ಫೆಬ್ರವರಿ 23 ರಂದು ಈ ಘಟನೆ ನಡೆದಿದ್ದು, ನಂತರ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಇದು ಹೈ ಪ್ರೊಫೈಲ್ ಕೇಸ್ ಆಗಿದ್ದರಿಂದ ಇಷ್ಟುದಿನ ಮುಚ್ಚಿಡಲಾಗಿತ್ತಂತೆ.
ನಟಿ ಸೋನಮ್ ಕಪೂರ್ ಅವರ ಮನೆಯಲ್ಲಿ ನಡೆದ ದರೋಡೆಯ ಬಗ್ಗೆ ತುಘಲಕ್ ರೋಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರಂತೆ. ಇದೊಂದು ಹೈ ಪ್ರೊಫೈಲ್ ಕೇಸ್ ಆಗಿರುವುದರಿಂದ ದೆಹಲಿ ಪೊಲೀಸ್ ನ ಹಿರಿಯ ಅಧಿಕಾರಿಗಳು ತಕ್ಷಣವೆ ತನಿಖೆಗಾಗಿ ಸ್ಕ್ವಾಡ್ ಗಳನ್ನು ರಚಿಸಿದ್ದಾರೆ. ಸದ್ಯ, ತನಿಖೆಯಲ್ಲಿ ನಟಿ ಸೋನಮ್ ಮತ್ತು ಪತಿ ಆನಂದ್ ಅವರ ಸಿಬ್ಬಂದಿಯನ್ನು ವಿಚಾರಣೆ ನಡೆಸಲಾಗುತ್ತಿದೆ. ದೆಹಲಿ ಪೊಲೀಸರು 9 ಕೇರ್‌ಟೇಕರ್‌ಗಳು, ಚಾಲಕರು, ತೋಟಗಾರರು ಮತ್ತು ಇತರ ಕಾರ್ಮಿಕರನ್ನು ಸೇರಿ 25 ಉದ್ಯೋಗಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ. ಎಫ್‌ಎಸ್‌ಎಲ್ ಕೂಡಾ ಅಪರಾಧದ ಸ್ಥಳದಿಂದ ಸಾಕ್ಷ್ಯ ಸಂಗ್ರಹಣೆಯಲ್ಲಿ ತೊಡಗಿಸಿಕೊಂಡಿದೆ. ಹಾಗೆಯೇ, ಈಗ ಹಲವು ಸಿಸಿಟಿವಿ ದೃಶ್ಯಾವಳಿಗಳನ್ನೂ ಪರಿಶೀಲಿಸಿದ್ದೇವೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಸೋನಮ್ ಮತ್ತು ಆನಂದ್ ಅವರ ಈ ದೆಹಲಿ ನಿವಾಸ ಅಮೃತಾ ಶೆರ್ಗಿಲ್ ಎಂಬ ಮಾರ್ಗದಲ್ಲಿದೆ. ನಟಿ ಸೋನಮ್ ಅವರ ಪತಿ, ಮಾವ ಹರೀಶ್ ಅಹುಜಾ ಮತ್ತು ಅತ್ತೆ ಪ್ರಿಯಾ ಅಹುಜಾ ಆನಂದ್ ಮತ್ತು ಅವರ ಪತಿಯ ಅಜ್ಜಿ ಸರಳಾ ಅಹುಜಾ ಅವರೊಂದಿಗೆ ಇದೇ ಮನೆಯಲ್ಲಿ ವಾಸಿಸುತ್ತಿದ್ದಾರೆ. ಫೆಬ್ರವರಿ 11 ರಂದು ಸೋನಮ್ ಅವರು ತಮ್ಮ ರೂಮ್​ನಲ್ಲಿನ ಕಪಾಟುಗಳನ್ನು ಪರಿಶೀಲಿಸಿದಾಗ ಚಿನ್ನಾಭರಣ ಮತ್ತು ನಗದು ಕಳ್ಳತನವಾಗಿರುವುದು ಗೊತ್ತಾಗಿದೆ ಎಂದು ಸರಳಾ ಅಹುಜಾ ಅವರು ದೂರಿನಲ್ಲಿ ತಿಳಿಸಿದ್ದಾರೆ. ಸರಳಾ ಅಹುಜಾ ಮತ್ತು ಸೋನಮ್ ಅವರ ಅಂದಾಜಿನ ಪ್ರಕಾರ ಕಳವು ಆಗಿರುವ ಚಿನ್ನಾಭರಣಗಳು ಮತ್ತು ನಗದಿನ ಮೌಲ್ಯ 1 ಕೋಟಿ 41 ಲಕ್ಷ ರೂಪಾಯಿ ಇರಬಹುದು. ಕೆಲವು ವರದಿಗಳ ಪ್ರಕಾರ 2.41 ಕೋಟಿ ಲೂಟಿಯಾಗಿದೆ ಎನ್ನಲಾಗುತ್ತಿದೆ. ಇನ್ನು, ಫೆಬ್ರವರಿ 23 ರಂದು ದೂರು ದಾಖಲಾಗಿದ್ದು, ಪೊಲೀಸರ ಪ್ರಕಾರ ಇದರ ಹಿಂದೆ ಮನೆಯಲ್ಲಿನ 25 ಕೆಲಸಗಾರರದ್ದೇ ಕೈವಾಡ ಇರಬಹುದು ಎಂದು ಹೇಳಲಾಗುತ್ತಿದೆ.