ಸಿನಿವಾಣಿ

'ಶುಗರ್ ಫ್ಯಾಕ್ಟರಿ'ಗೆ ಜತೆಯಾದ ಸೋನಲ್​ ಮಾಂಟೆರೊ

ಬೆಂಗಳೂರು: ಯೋಗರಾಜ್​ ಭಟ್​ ನಿರ್ದೇಶನದ 'ಪಂಚತಂತ್ರ' ಚಿತ್ರದ ಮೂಲಕ ದೊಡ್ಡ ಹೆಸರು ಮಾಡಿದವರು ಕರಾವಳಿ ಹುಡುಗಿ ಸೋನಲ್​ ಮಾಂಟೆರೊ. ಸದ್ಯ, ಜಯತೀರ್ಥ ನಿರ್ದೇಶನದ 'ಬನಾರಸ್​' ಚಿತ್ರದಲ್ಲಿ ನಟಿಸುತ್ತಿರುವ ಅವರು, ಇದೀಗ ಸದ್ದಿಲ್ಲದೆ ಇನ್ನೊಂದು ಹೊಸ ಚಿತ್ರವನ್ನು ಸೈನ್​ ಮಾಡಿದ್ದಾರೆ.

ಸೋನಲ್​ ಸೈನ್​ ಮಾಡಿರುವ ಹೊಸ ಚಿತ್ರದ ಹೆಸರು 'ಶುಗರ್​ ಫ್ಯಾಕ್ಟರಿ'. ಹೆಸರು ಎಲ್ಲೋ ಕೇಳಿದ ಹಾಗಿದೆಯಲ್ಲಾ ಎಂದನಿಸಬಹುದು. ಇತ್ತೀಚೆಗಷ್ಟೇ 'ಡಾರ್ಲಿಂಗ್' ಕೃಷ್ಣ ಅಭಿನಯದಲ್ಲಿ ಈ ಚಿತ್ರದ ಘೋಷಣೆಯಾಗಿತ್ತು. ಆಗ ನಾಯಕಿ ಯಾರಾಗಬಹುದು ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಇದೀಗ ಸೋನಲ್​ ನಾಯಕಿಯಾಗಿ ಚಿತ್ರತಂಡಕ್ಕೆ ಸೇರಿಕೊಂಡಿದ್ದಾರೆ.

ರೊಮ್ಯಾಂಟಿಕ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಕೃಷ್ಣನಿಗೆ ಮೂವರು ನಾಯಕಿಯರು ಇರುತ್ತಾರಂತೆ. ಈ ಪೈಕಿ, ಸದ್ಯ ಸೋನಲ್​ ಆಯ್ಕೆ ಮಾತ್ರ ಆಗಿದೆ. ಮಿಕ್ಕಂತೆ ಇನ್ನಿಬ್ಬರು ನಾಯಕಿಯರ ಹುಡುಕಾಟ ನಡೆದಿದ್ದು, ಸದ್ಯದಲ್ಲೇ ಫೈನಲ್​ ಆಗಲಿದೆ.

ಈ ಚಿತ್ರವನ್ನು ದೀಪಕ್​ ಅರಸ್​ ನಿರ್ದೇಶನ ಮಾಡುತ್ತಿದ್ದಾರೆ. ನಟಿ ಅಮೂಲ್ಯ ಅವರ ಸಹೋದರರಾದ ದೀಪಕ್​, ಈ ಹಿಂದೆ 'ಮನಸಾಲಜಿ' ಎಂಬ ಚಿತ್ರ ನಿರ್ದೇಶನ ಮಾಡಿದ್ದರು. ಇದೀಗ ಎರಡನೆಯ ಚಿತ್ರವನ್ನು ನಿರ್ದೇಶಿಸುವುದಕ್ಕೆ ಅವರು ಸಿದ್ಧತೆ ನಡೆಸಿದ್ದು, ಚಿತ್ರಕ್ಕೆ ಅವರೇ ಕಥೆ, ಚಿತ್ರಕಥೆ ಬರೆದಿದ್ದಾರೆ.

ಬಾಲಮಣಿ ಪ್ರೊಡಕ್ಷನ್ಸ್​ನಲ್ಲಿ ಗಿರೀಶ್ ಆರ್ ನಿರ್ಮಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಜನವರಿಯಲ್ಲಿ ಪ್ರಾರಂಭವಾಗಲಿದೆ. ಮೊದಲ ಹಂತವಾಗಿ ಬೆಂಗಳೂರಿನಲ್ಲಿ ನಡೆಯಲಿದ್ದು, ನಂತರದ ದಿನಗಳಲ್ಲಿ ಮೈಸೂರು, ಗೋವಾ ಅಲ್ಲದೆ ವಿದೇಶದಲ್ಲೂ ನಡೆಯಲಿದೆ.

'ಶುಗರ್​ ಫ್ಯಾಕ್ಟರಿ' ಚಿತ್ರದಲ್ಲಿ ಆರು ಹಾಡುಗಳಿದ್ದು, ಕಬೀರ್ ರಫಿ ಸಂಗೀತ ನೀಡುತ್ತಿದ್ದಾರೆ. ಇನ್ನು, ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಈ ಚಿತ್ರಕ್ಕಿದೆ.