ಸಿನಿವಾಣಿ

ಐಫಲ್​ ಟವರ್​ ಎದುರು ಹನ್ಸಿಕಾಗೆ ಪ್ರಪೋಸ್​ ಮಾಡಿದ ಸೋಹೈಲ್​

ಪ್ಯಾರಿಸ್​: ನಟಿ ಹನ್ಸಿಕಾ ಮೋಟ್ವಾನಿ, ಸೋಹೈಲ್​ ಕಠೂರಿಯಾ ಎಂಬ ತಮ್ಮ ಪಾರ್ಟ್ನರ್​ನನ್ನು ಮದುವೆಯಾಗುತ್ತಿರುವ ಸುದ್ದಿ ಕಳೆದ ಕೆಲವು ದಿನಗಳಿಂದ ಕೇಳಿ ಬರುತ್ತಿದೆ. ಆದರೆ, ಆತ ಯಾರು, ಹೇಗಿದ್ದಾರೆ ಎಂಬ ವಿಷಯ ಬಹಳಷ್ಟು ಜನರಿಗೆ ಗೊತ್ತಿರಲಿಲ್ಲ. ಅಷ್ಟೇ ಅಲ್ಲ, ಸೋಹೈಲ್​ರನ್ನು ಹನ್ಸಿಕಾ ಮದುವೆಯಾಗುತ್ತಿರುವ ವಿಷಯ ನಿಜ ಎಂಬುದರ ಬಗ್ಗೆಯೂ ಆಕೆ ಮಾತನಾಡಿರಲಿಲ್ಲ. ಈಗ ಇದೇ ಮೊದಲ ಬಾರಿಗೆ ಹನ್ಸಿಕಾ ತಮ್ಮ ಎಂಗೇಜ್​ಮೆಂಟ್​ ಫೋಟೋಗಳನ್ನು ಸಹ ಹಂಚಿಕೊಂಡಿದ್ದಾರೆ.

ಅಂದಹಾಗೆ, ಹನ್ಸಿಕಾ ಮತ್ತು ಸೋಹೈಲ್​ ಅವರ ನಿಶ್ಚಿತಾರ್ಥ ಆಗಿದ್ದೆಲ್ಲಿ ಗೊತ್ತಾ? ಪ್ಯಾರಿಸ್​ನ ಐಫೆಲ್​ ಟವರ್​ನ ಮುಂಬಾಗದಲ್ಲಿ. ಕ್ಯಾಂಡಲ್​ ಮತ್ತು ಗುಲಾಬಿಗಳನ್ನು ಹೃದಯದ ಆಕಾರದಲ್ಲಿ ಅಲಂಕರಿಸಿ, ಅದರ ನಡುವೆ ನಿಂತ ಹನ್ಸಿಕಾಗೆ ಸೋಹೈಲ್​ ಪ್ರಪೋಸ್​ ಮಾಡಿದ್ದಾರೆ. ಅವರ ಹಿಂದೆ 'ಮ್ಯಾರಿ ಮೀ' ಎಂಬ ಪದಗಳನ್ನು ನೋಡಬಹುದು. ಇದೇ ಸಂದರ್ಭದಲ್ಲಿ ಹನ್ಸಿಕಾ ಮತ್ತು ಸೋಹೈಲ್​ ಪರಸ್ಪರ ಉಂಗುರಗಳನ್ನು ತೊಡಿಸಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಈ ಕುರಿತು ಸೋಷಿಯಲ್​ ಮೀಡಿಯಾದಲ್ಲಿ 'ಈಗ ಮತ್ತು ಮುಂದೆಯೂ' ಎಂದು ಹನ್ಸಿಕಾ ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಯಿಸಿರುವ ಸೋಹೈಲ್​, 'ಐ ಲವ್​ ಯೂ' ಎಂದು ಹೇಳಿದ್ದಾರೆ. ಅನೂಷ್ಕಾ ಶೆಟ್ಟಿ, ಖುಷ್ಬೂ, ಶ್ರೀಯಾ ರೆಡ್ಡಿ ಮುಂತಾದವರು ಈ ಜೋಡಿಗೆ ಶುಭ ಕೋರಿದ್ದಾರೆ.

ಹನ್ಸಿಕಾ ಮತ್ತು ಸೋಹೈಲ್​ ಮದುವೆ ಡಿಸೆಂಬರ್​ 4ರಂದು ಜೈಪುರದ ಮಂಡೋಟ ಫೋರ್ಟ್​ನಲ್ಲಿ ನಡೆಯಲಿದೆ. ಡಿ. 2ರಂದು ಮೆಹಂದಿ ಕಾರ್ಯಕ್ರಮವಿದ್ದು, ಮರುದಿನ ಸಂಗೀತ್​ ಆಯೋಜಿಸಲಾಗಿದೆ. ಡಿ. 4ರ ಮುಂಜಾನೆ ಹಳದಿ ಕಾರ್ಯಕ್ರಮ ನಡೆಯಲಿದ್ದು, ಸಂಜೆ ಮದುವೆ ನಡೆಯಲಿದೆ.