ಹೈದರಾಬಾದ್: ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಖ್ಯಾತಿಯ ಬಗ್ಗೆ ಯಾರಿಗೂ ಹೆಚ್ಚಿಗೆ ಹೇಳಬೇಕಿಲ್ಲ. ಪುಷ್ಪ ಸಿನಿಮಾ ಬಿಡುಗಡೆಯಾದ ಬಳಿಕವಂತೂ ಅಲ್ಲು ಅರ್ಜುನ್ ನ್ಯಾಷನಲ್ ಸ್ಟಾರ್ ಆಗಿಬಿಟ್ಟಿದ್ದಾರೆ. ಇದೇ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದು ಅಲ್ಲು ಅರ್ಜುನ್ ಅವರ ಖ್ಯಾತಿಯನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಿದೆ. ಇದೀಗ ತಮ್ಮ ಖ್ಯಾತಿಯನ್ನು ಇನ್ನೊಬ್ಬರಿಗೆ ಹಂಚುವ ಮೂಲಕ ಅಲ್ಲು ಅರ್ಜುನ್ ದೊಡ್ಡತನ ಮೆರೆದಿದ್ದಾರೆ.
ಅರೇ ಅದು ಹೇಗೆ ಸಾಧ್ಯ? ಊಟ ಮತ್ತು ದುಡ್ಡು ಹಂಚಿಕೊಳ್ಳುವುದನ್ನು ನೋಡಿದ್ದೇವೆ ಖ್ಯಾತಿ ಹಂಚಿಕೊಳ್ಳುವುದು ಹೇಗೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದು. ಅದಕ್ಕೆ ಉತ್ತರ ಮುಂದಿದೆ. ಅಲ್ಲು ಅರ್ಜುನ್ ಅವರ ಸೋಶಿಯಲ್ ಮೀಡಿಯಾ ಕ್ರೇಜ್ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಇನ್‌ಸ್ಟಾಗ್ರಾಮ್‌ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಟಾಲಿವುಡ್ ಹೀರೋ ಎಂಬ ದಾಖಲೆಯನ್ನೂ ಅಲ್ಲು ಅರ್ಜುನ್ ಹೊಂದಿದ್ದಾರೆ. ಆದರೆ, ಇತ್ತೀಚೆಗೆ ಅಲ್ಲು ಅರ್ಜುನ್ ಫಾಲೋವರ್ಸ್ ಹೆಚ್ಚಿಸಿಕೊಳ್ಳಲು ಬೇರೆಯವರಿಗೆ ಸಹಾಯ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಒಬ್ಬರ ಫಾಲೋವರ್ಸ್ ಹೆಚ್ಚಿಸಲು ಅಲ್ಲು ಅರ್ಜುನ್ ವಿಡಿಯೋ ಮೂಲಕ ವಿಶೇಷ ಮನವಿ ಮಾಡಿಕೊಂಡಿದ್ದಾರೆ. ಇದೀಗ ಆ ವಿಡಿಯೋ ವೈರಲ್ ಆಗಿದೆ. ಹಾಗಾದರೆ, ಆ ಸೋಶಿಯಲ್ ಮೀಡಿಯಾ ಪ್ರಭಾವಿ ಯಾರು..?
ತೆಲಂಗಾಣ ವಿಧಾನಸಭೆ ಚುನಾವಣೆಗೆ ಇಂದು ಮತದಾನ ನಡೆಯುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಸಾಮಾನ್ಯ ಜನರಿಂದಿಡಿದು ಟಾಲಿವುಡ್ ಸೆಲೆಬ್ರಿಟಿಗಳು ಕೂಡ ಮತಗಟ್ಟೆಗೆ ಬಂದು ಮತದಾನ ಮಾಡಿದ್ದಾರೆ. ಅಲ್ಲು ಅರ್ಜುನ್ ಕೂಡ ಜುಬಿಲಿ ಹಿಲ್ಸ್ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಿದರು. ವಿಶೇಷ ಅಂದರೆ, ಅಲ್ಲು ಅರ್ಜುನ್ ಜನ ಸಾಮಾನ್ಯರ ಜತೆಗೆ ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಬಳಿಕ ಅಲ್ಲಿನ ಅಭಿಮಾನಿಯೊಬ್ಬರಿಗೆ ವಿಡಿಯೋ ಕೂಡ ಮಾಡಿಕೊಟ್ಟರು.
ಅಂದಹಾಗೆ ಅಲ್ಲು ಅರ್ಜುನ್ನಿಂದ ವಿಡಿಯೋ ಭಾಗ್ಯ ಪಡೆದ ಆ ಸೋಶಿಯಲ್ ಮೀಡಿಯಾ ಪ್ರಭಾವಿ ಹೆಸರು ಅಶ್ವಿನಿ. ಆಕೆಯ ಜತೆ ಜೊತೆ ರೀಲ್ಸ್ ಮಾಡಿದ ಅಲ್ಲು ಅರ್ಜುನ್, ಒಳ್ಳೆಯ ಫಾಲೋವರ್ಸ್ ಪಡೆಯಲು ಈ ವಿಡಿಯೋ ಮಾಡುತ್ತಿದ್ದೇನೆ. ಈಗ 13 ಸಾವಿರ ಫಾಲೋವರ್ಸ್ ಇದ್ದಾರೆ ಮತ್ತು ಈ ವಿಡಿಯೋ ಮೂಲಕ 30 ಸಾವಿರ ಫಾಲೋವರ್ಸ್ ಬರಲಿದ್ದಾರೆ ಎಂದು ಹೇಳಿದರು.
ಇದೇ ವಿಡಿಯೋವನ್ನು ಅಶ್ವಿನಿ ತನ್ನ ಇನ್ಸ್ಟಾಗ್ರಾಂನಲ್ಲಿ ಇದೀಗ ಪೋಸ್ಟ್ ಮಾಡಿದ್ದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ವಿಡಿಯೋ ಪೋಸ್ಟ್ ಮಾಡಿದ ಕೇವಲ 4 ಗಂಟೆಗಳಲ್ಲಿ 5 ಸಾವಿರ ಫಾಲೋವರ್ಸ್ ಹೆಚ್ಚಾಗಿದೆ. 13 ಸಾವಿರ ಇದ್ದ ಫಾಲೋವರ್ಸ್ ಇದೀಗ 18 ಸಾವಿರ ಆಗಿದೆ. ಸದ್ಯ ವಿಡಿಯೋ ವೈರಲ್ ಆಗುತ್ತಿದ್ದು, ಇನ್ನಷ್ಟು ಹೆಚ್ಚಾಗಲಿದೆ. ಒಂದೇ ಒಂದು ವಿಡಿಯೋ ಇದೀಗ ಅಶ್ವಿನಿ ಇನ್ಸ್ಟಾಗ್ರಾಂ ಖಾತೆಯ ಗತಿಯನ್ನೇ ಬದಲಿಸಲಿದೆ. (ಏಜೆನ್ಸೀಸ್)