ಸಿನಿವಾಣಿ

'ಜನನ' ಎಂಬ ಮಕ್ಕಳ ಚಿತ್ರದಲ್ಲಿ ಪ್ರಕೃತಿ ಕುರಿತು ಸಂದೇಶ …

ಬೆಂಗಳೂರು: ಶಶಿಕುಮಾರ್​ ಮಗ ಅಕ್ಷಿತ್​ ಶಶಿಕುಮಾರ್​ ಅಭಿನಯದ 'ಓ ಮೈ ಲವ್​' ಎಂಬ ಚಿತ್ರವನ್ನು ಕೆಲವು ತಿಂಗಳುಗಳ ಹಿಂದೆ ತೆರೆಗೆ ತಂದಿದ್ದ ಸ್ಮೈಲ್​ ಶ್ರೀನು, ಇದೀಗ ನಿರ್ಮಾಣದತ್ತ ಹೊರಳಿದ್ದಾರೆ. ಸ್ಮೈಲ್ ಜೋಹರ್ ಟಾಕೀಸ್ ಎಂಬ ನಿರ್ಮಾಣ ಸಂಸ್ಥೆ ಹುಟ್ಟುಹಾಕಿ, ಅದರಡಿ 'ಜನನ' ಎಂಬ ಚಿತ್ರವನ್ನು ಸದ್ದಿಲ್ಲದೆ ನಿರ್ಮಿಸಿದ್ದಾರೆ.

ಅಂದಹಾಗೆ, ಇದೊಂದು ಮಕ್ಕಳ ಚಿತ್ರವಾಗಿದ್ದು, ಚಿತ್ರಕ್ಕೆ 'ಜನನ' ಎಂಬ ಹೆಸರನ್ನು ಇಡಲಾಗಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗದಿದ್ದರೆ ಅವರ ಜೀವನ ಯಾವ ರೀತಿ ಹಾಳಾಗುತ್ತದೆ ಎಂಬುದನ್ನು ಈ ಚಿತ್ರದಲ್ಲಿ ಹೇಳಲಾಗುತ್ತಿದೆ. ಬೆಂಗಳೂರು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಚಿತ್ರೀಕರಣ ನಡೆಸಲಾಗಿರುವ 'ಜನನ' ಚಿತ್ರವು ಜನವರಿಯಲ್ಲಿ ತೆರೆಕಾಣಲಿದೆ.

ಈಗಿನ ಸಂದರ್ಭದಲ್ಲಿ ಪ್ರಕೃತಿಯ ಬಗ್ಗೆ ಜನರಲ್ಲಿ ಕಾಳಜಿ ಕಡಿಮೆಯಾಗುತ್ತಿದೆ. ಪ್ರಕೃತಿ ಮುನಿಸಿಕೊಂಡರೆ ನಮ್ಮಗತಿ ಏನಾಗಬಹುದು? ನಮಗೆಲ್ಲಾ ಏನೇನು ತೊಂದರೆಯಾಗಬಹುದು? ಎಂಬ ವಿಷಯಗಳನ್ನು ಈ ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದೆಯಂತೆ.

ಸೀನು ಈ ಚಿತ್ರಕ್ಕೆ ನಿರ್ಮಾಪಕರಷ್ಟೇ. ಮಿಕ್ಕಂತೆ ನಿರ್ದೇಶನದ ಜವಾಬ್ದಾರಿಯನ್ನು ಅವರು ಮಧುಸೂಧನ್​ ಎಂಬುವವರಿಗೆ ಕೊಟ್ಟಿದ್ದಾರೆ. ವರ್ಷಾ ಶೆಟ್ಟಿ, ಬೇಬಿ ಮೈರಾ, ಮಾಸ್ಟರ್ ಚಿನ್ಮಯ್, ಬೇಬಿ ಶಾನ್ವಿ, ಬೇಬಿ ಪೂಜಾ ಮುಂತಾದವರು ನಟಿಸಿರುವ ಈ ಚಿತ್ರಕ್ಕೆ ಭರತ್ ಅವರ ಛಾಯಾಗ್ರಣವಿದೆ.