ಸಿನಿವಾಣಿ

‘ದಿ’ ಸಿನಿಮಾಗೆ 'ಸಿಂಪಲ್' ಸುನಿ ಸಾಥ್ … ಶೀರ್ಷಿಕೆ ಬಿಡುಗಡೆ

chetannadiger

ಬೆಂಗಳೂರು: ಈ ಹಿಂದೆ ‘ಕಡೆಮನೆ’ ಎಂಬ ಸಿನಿಮಾ ಮಾಡಿದ್ದರು ವಿನಯ್. ಈಗ ಸದ್ದಿಲ್ಲದೆ ಅವರು ಹೊಸದೊಂದು ಸಿನಿಮಾ ಮಾಡಿ ಮುಗಿಸಿದ್ದಾರೆ. ಈ ಚಿತ್ರದ ಹೆಸರೇನೆಂದು ಅವರು ಬಿಟ್ಟುಕೊಟ್ಟಿರಲಿಲ್ಲ. ಈಗ ಅವರು ಆ ಹೆಸರನ್ನು ನಿರ್ದೇಶಕ ಸಿಂಪಲ್​ ಸುನಿ ಅವರಿಂದ ಬಿಡುಗಡೆ ಮಾಡಿಸಿದ್ದಾರೆ. ಅಂದಹಾಗೆ, ಈ ಚಿತ್ರಕ್ಕೆ 'ದಿ' ಎಂಬ ಹೆಸರನ್ನು ಇಡಲಾಗಿದೆ.

ಇತ್ತೀಚೆಗೆ ವಿನಯ್​ ತಮ್ಮ ತಂಡದವರನ್ನು ಕಟ್ಟಿಕೊಂಡು 'ಸಿಂಪಲ್' ಸುನಿ ಆಫೀಸಿಗೆ ಹೋಗಿ, ಅಲ್ಲಿ ಚಿತ್ರದ ಹೆಸರನ್ನು ಬಿಡುಗಡೆ ಮಾಡಿಸಿಕೊಂಡು ಬಂದಿದ್ದಾರೆ. ಟೈಟಲ್​ ಬಿಡುಗಡೆ ಮಾಡಿ, ಚಿತ್ರದ ತುಣುಕುಗಳನ್ನು ನೋಡಿದ ಸುನಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಶೀರ್ಷಿಕೆ ಬಿಡುಗಡೆ ಮೊದಲ ಹಂತವಾಗಿದ್ದು, ಸದ್ಯದಲ್ಲೇ ಚಿತ್ರದ ಫಸ್ಟ್​ಲುಕ್​ ಬಿಡುಗಡೆ ಆಗಲಿದೆ. ಅಷ್ಟೇ ಅಲ್ಲ, ನಾಯಕ-ನಾಯಕಿ ಯಾರೆಂಬುದು ಬಹಿರಂಗಪಡಿಸಲಾಗುತ್ತದೆ. ಲವ್ ಸ್ಟೋರಿ ಸಬ್ಜೆಕ್ಟ್ ಒಳಗೊಂಡ ಈ ಚಿತ್ರ ಡಾಲರ್ ಸುತ್ತ ನಡೆಯುವ ಕಥಾಹಂದರ ಒಳಗೊಂಡಿದೆ.

'ದಿ' ಚಿತ್ರದ ಚಿತ್ರೀಕರಣ ಮುಗಿದು, ಇದೀಗ ಪೋಸ್ಟ್​ ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ಫೆಬ್ರವರಿ ಕೊನೆಯ ವಾರ ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆ. ವಿಡಿಕೆ ಸಿನಿಮಾಸ್​ ಬ್ಯಾನರ್​ನಡಿ ನಿರ್ಮಾಣವಾಗಿರುವ ಈ ಚಿತ್ರವನ್ನು ತುಮಕೂರು, ಮೈಸೂರು, ಮೂಡಿಗೆರೆ, ಚಿಕ್ಕಮಗಳೂರು, ಹೊನ್ನಾವರ, ಉತ್ತರ ಕನ್ನಡ, ಬೆಂಗಳೂರು, ಮುಂತಾದ ಕಡೆ ಚಿತ್ರೀಕರಣ ಮಾಡಲಾಗಿದೆ.

'ದಿ' ಚಿತ್ರದಲ್ಲಿ ಹರಿಣಿ, ಬಾಲ ರಾಜ್ವಾಡಿ, ನಾಗೇಂದ್ರ ಅರಸ್, 'ಕಾಮಿಡಿ ಕಿಲಾಡಿಗಳು' ಚಂದ್ರು, ಶರಣ್, ಸುರೇಶ್ ಬಾಬು, ಗಣೇಶ್, ಕಲಾರತಿ ಮಹದೇವ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಆಲನ್ ಭರತ್ ಛಾಯಾಗ್ರಹಣ, ಸ್ಟೀವನ್ ಸತೀಶ್ ಸಂಗೀತ ಈ ಚಿತ್ರಕ್ಕಿದೆ.