ಸಿನಿವಾಣಿ

ಕಿರುತೆರೆಯಲ್ಲಿ ಸಿಂಪಲ್​ ಸುನಿ ಕಮಾಲ್​ ; ನಾಳೆಯಿಂದ ಉದಯ ಟಿವಿಯಲ್ಲಿ "ಶಾಂಭವಿ' ಧಾರಾವಾಹಿ ಪ್ರಸಾರ

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಕನ್ನಡ ಕಿರುತೆರೆಯಲ್ಲಿ ವೈವಿಧ್ಯಮಯ ಮನರಾಂಜನಾತ್ಮಕ ಕಾರ್ಯಕ್ರಮಗಳ ಮೂಲಕ ಮನೆಮಾತಾಗಿರುವ ಉದಯ ಟಿವಿ, "ಕನ್ಯಾದಾನ', "ಆನಂದರಾಗ', "ಅಣ್ಣತಂಗಿ', "ಸೇವಂತಿ', "ಜನನಿ', "ರಾಧಿಕಾ', "ಗೌರಿಪುರದ ಗಯ್ಯಾಳಿಗಳು' ಸೇರಿ ಹಲವು ಕೌಟುಂಬಿಕ ಧಾರಾವಾಹಿಗಳಿಂದ ವೀಕ್ಷಕರನ್ನು ರಂಜಿಸುತ್ತಿದೆ. ಇದೀಗ ವಿನೂತನ ಶೈಲಿಯ ನಿರೂಪಣೆಯಿರುವ, ಅದ್ದೂರಿ "ಶಾಂಭವಿ' ಎಂಬ ಹೊಸ ಕಥಾನಕವನ್ನು ವೀಕ್ಷಕರ ಮುಂದೆ ತರಲು ಸಜ್ಜಾಗುತ್ತಿದೆ.

"ಸಿಂಪಲ್ಲಾಗ್​ ಒಂದ್​ ಲವ್​ಸ್ಟೋರಿ', "ಬಹುಪರಾಕ್​', "ಚಮಕ್​', "ಸಖತ್​' ಸೇರಿ ಹಲವು ಚಿತ್ರಗಳಿಗೆ ಆ್ಯಕ್ಷನ್​&ಕಟ್​ ಹೇಳಿರುವ ನಿರ್ದೇಶಕ ಮೊಟ್ಟ ಮೊದಲ ಬಾರಿಗೆ ನಿರ್ದೇಶಿಸಿರುವ ಧಾರಾವಾಹಿ "ಶಾಂಭವಿ'. ಶಿವಗಾಮಿ ಸಾವಿರಾರು ಕೋಟಿ ರೂ. ಆಸ್ತಿಯ ಒಡತಿ. ಆಕೆಯ ಅಣ್ಣ ಹರಿಪ್ರಸಾದ್​. ಅಣ್ಣತಂಗಿಗೆ ಅವರಿಬ್ಬರೇ ಪ್ರಪಂಚ. ನಾಯಕ ಅಶೋಕ, ಅವರ ಸಂಸ್ಥೆಯಲ್ಲಿ ಶಿಕ್ಷಕನಾಗಿ ಸೇರುತ್ತಾನೆ. ಮಧ್ಯಮ ವರ್ಗದ ಅಶೋಕ, ಆಗರ್ಭ ಶ್ರೀಮಂತೆ ಶಿವಗಾಮಿ ಪ್ರೀತಿಸಿ, ಮದುವೆಯಾಗುತ್ತಾರೆ. ಅವರಿಗೆ ಜನಿಸುವ ಮಗುವೇ ಶಾಂಭವಿ. ಆರು ವರ್ಷದ ಶಾಂಭವಿ ಕಾಣೆಯಾಗುತ್ತಾಳೆ, ಆಕೆಯ ಅಮ್ಮ ಶಿವಗಾಮಿ ಹುಚ್ಚಿಯಾಗುತ್ತಾಳೆ. ನಂತರ ತನ್ನ ಕುಟುಂಬದ ಸಮಸ್ಯೆಗೆ ಕಾರಣರಾದವರಿಗೆ ಶಾಂಭವಿ ಹೇಗೆ ಬುದ್ದಿ ಕಲಿಸುತ್ತಾಳೆ ಎಂಬುದರ ಸುತ್ತ ಕಥೆ ಸಾಗುತ್ತದೆ.

ಸುನಿ ಸಿನಿಮಾಸ್​ ಸಂಸ್ಥೆಯ ಅಡಿಯಲ್ಲಿ ಶಾಂಭವಿ ನಿರ್ಮಾಣವಾಗುತ್ತಿದ್ದು ಮನು ಛಾಯಾಗ್ರಹಣ, ರಾಧಾ ವೆಂಕಟ್​ ಸಂಭಾಷಣೆ, ಪರಂ ಸಂಕಲನ, ವಿ. ನಾಗೇಂದ್ರ ಪ್ರಸಾದ್​ ಸಂಗೀತ ಮತ್ತು ಸಾಹಿತ್ಯವಿರಲಿದೆ. ಶಾಂಭವಿ ಪಾತ್ರದಲ್ಲಿ ಬೇಬಿ ರಚನಾ ಅಭಿನಯಿಸುತ್ತಿದ್ದು, ಐಶ್ವರ್ಯ ಸಿಂಧೋಗಿ, ಹರೀಶ್​ ಟಿವಿ, ವಿನಯ್​ ಗೌಡ, ಅಂಬುಜಾ, ಪೂಜಿತಾ, ಡಾಲಿ ರಾಜೇಶ್​, ಸೂರ್ಯ, ರೋಹಿತ್​ ತಾರಾಗಣದಲ್ಲಿದ್ದಾರೆ. ಶಾಂಭವಿ ಧಾರಾವಾಹಿ ಸೆ. 11ರಿಂದ, ಸೋಮವಾರದಿಂದ ಶನಿವಾರದವರೆಗೆ ಪ್ರತಿದಿನ ರಾತ್ರಿ 7.30ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.