ಸಿನಿವಾಣಿ

'777 ಚಾರ್ಲಿ' ರಿಲೀಸ್ ಗೆ ರೆಡಿ! ಒಂದು ವರ್ಷದ ಬಳಿಕ ತೆರೆ ಮಿಂಚಲಿರುವ ರಕ್ಷಿತ್ ಶೆಟ್ಟಿ...

ಸ್ಯಾಂಡಲ್​ವುಡ್​ನ ಸಿಂಪಲ್ ಸ್ಟಾರ್ ನಟ ರಕ್ಷಿತ್ ಶೆಟ್ಟಿ ಅವರು ಒಂದು ವರ್ಷ ಕಳೆದರು ಸಿನಿಮಾ ಪರದೆಯ ಮೇಲೆ ಕಾಣಿಸಿಕೊಳ್ಳಲೆ ಇಲ್ಲ. ಹಾಗಾಗಿ, ರಕ್ಷಿತ್ ಅವರ '777 ಚಾರ್ಲಿ' ಸಿನಿಮಾಗಾಗಿ ಅವರ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಈಗ, ರಕ್ಷಿತ್ ಅವರನ್ನು ಒಂದು ವರ್ಷದ ನಂತರ ತೆರೆ ಮೇಲೆ ನೋಡಲು ಕಾಯುತ್ತಿರುವ ಅಭಿಮಾನಿಗಳಿಗೆ ಒಂದು ಗುಡ್ ನ್ಯೂಸ್.
ಈ ಬಹುನಿರೀಕ್ಷಿತ ಸಿನಿಮಾದ ಬಿಡುಗಡೆ ದಿನಾಂಕವು ಶೀಘ್ರದಲ್ಲೇ ಘೋಷಣೆಯಾಗಲಿದೆಯಂತೆ. '777 ಚಾರ್ಲಿ' ಸಿನಿಮಾದ ಸೆನ್ಸಾರ್ ಪೂರ್ಣಗೊಂಡಿದ್ದು, ಸಿನಿಮಾ ಯು/ಎ ಪ್ರಮಾಣಪತ್ರ ಗಿಟ್ಟಿಸಿಕೊಂಡಿದೆ. ಈ ಮಾಹಿತಿಯ ಕುರಿತು ನಟ ರಕ್ಷಿತ್ ಶೆಟ್ಟಿ, ನಿರ್ದೇಶಕ ಕಾರ್ತಿಕ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಹೌದು, ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿರುವ ನಟ ರಕ್ಷಿತ್ ಶೆಟ್ಟಿ ಅವರು ತಮ್ಮ ಸಿನಿಮಾದ ಬಿಡುಗಡೆ ದಿನಾಂಕವನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದು ತಿಳಿಸಿದ್ದಾರೆ. ಪರಂವಃ ಸ್ಟುಡಿಯೋಸ್ ಅಡಿಯಲ್ಲಿ '777 ಚಾರ್ಲಿ' ನಿರ್ಮಾಣ ಆಗಿದ್ದು, ಇದು ಒಂದು ಪ್ಯಾನ್ ಇಂಡಿಯಾ ಸಿನಿಮಾ ಆಗಿರಲಿದೆ.
ಚಿತ್ರದಲ್ಲಿ ನಟ ರಕ್ಷಿತ್ ಶೆಟ್ಟಿಗೆ ಜೋಡಿಯಾಗಿ ನಟಿ ಸಂಗೀತಾ ಶೃಂಗೇರಿ ನಟಿಸಿದ್ದಾರೆ. ಸಿನಿಮಾ ಕಳೆದ ಡಿಸೆಂಬರ್ 31ಕ್ಕೆ ಬಿಡುಗಡೆಯಾಗಬೇಕಿತ್ತು. ಆದರೆ, ಕೊನೆ ಕ್ಷಣದಲ್ಲಿ ಚಿತ್ರ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿತ್ತು. '777 ಚಾರ್ಲಿ' ಸಿನಿಮಾ ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ತೆರೆಕಾಣಲಿದೆ.
ಚಿತ್ರದ ನಿರ್ದೇಶಕ ಕಿರಣ್ ರಾಜ್‌‌ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದು, "ನಾವು ಈ ಚಿತ್ರಕ್ಕೆ 'ಯು' ಪ್ರಮಾಣಪತ್ರ ನಿರೀಕ್ಷಿಸಿದ್ದೇವು. ಆದರೆ 'ಧರ್ಮ' ಎಂಬ ಪಾತ್ರದ ಜೀವನಶೈಲಿಯನ್ನು ವಿವರಿಸಲು ಸಿಗರೇಟ್, ಬಿಯರ್ ಉಪಯೋಗಿಸುವುದು ಅನಿವಾರ್ಯವಾಗಿತ್ತು. ಇದೇ ಕಾರಣದಿಂದ ಸೆನ್ಸಾರ್ ಮಂಡಳಿ ನಮ್ಮ ಸಿನಿಮಾಗೆ ಯು/ಎ ಪ್ರಮಾಣಪತ್ರ ನೀಡಿದೆ" ಬರೆದುಕೊಂಡಿದ್ದಾರೆ.