ಸಿನಿವಾಣಿ

ಪ್ರಭುದೇವ ಅಭಿನಯದ 'Wolf' ಚಿತ್ರದ ಚಿತ್ರೀಕರಣ ಮುಕ್ತಾಯ … 2023ರಲ್ಲಿ ಬಿಡುಗಡೆ

chetannadiger

ಬೆಂಗಳೂರು: ಕೆಲವು ತಿಂಗಳುಗಳ ಹಿಂದೆಯೇ ಪ್ರಭುದೇವ ಅಭಿನಯದ ಪ್ಯಾನ್​ ಇಂಡಿಯಾ ಚಿತ್ರವೊಂದನ್ನು ತಮ್ಮ ಸಂದೇಶ್​ ಪ್ರೊಡಕ್ಷನ್ಸ್​ ಮೂಲಕ ಶುರು ಮಾಡಿದ್ದರು ಹಿರಿಯ ನಿರ್ಮಾಪಕ ಸಂದೇಶ್​ ನಾಗರಾಜ್​. ಈ ಚಿತ್ರಕ್ಕೆ 'ವುಲ್ಫ್​' (ತೋಳ) ಎಂಬ ಹೆಸರನ್ನು ಇಡಲಾಗಿತ್ತು. ಚಿತ್ರೀಕರಣ ಪ್ರಾರಂಭವಾಗಿದ್ದಷ್ಟೇ ಗೊತ್ತು. ಆ ನಂತರ ಚಿತ್ರದ ಪ್ರಗತಿಯ ಬಗ್ಗೆ ಯಾವುದೇ ಸುದ್ದಿ ಬಂದಿರಲಿಲ್ಲ. ಇದೀಗ ಈ ಚಿತ್ರದ ಚಿತ್ರೀಕರಣ ಸದ್ದಿಲ್ಲದೆ ಮುಗಿದಿದೆ.

ಪ್ರಭುದೇವ, ಅಂಜು ಕುರಿಯನ್, ಲಕ್ಷ್ಮೀ ರೈ, ಅನಸೂಯ ಭಾರದ್ವಾಜ್​ ('ಪುಷ್ಪ' ಖ್ಯಾತಿ) ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಅದ್ದೂರಿಯಾಗಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಪಾಂಡಿಚೇರಿ, ಚೆನೈ, ಬೆಂಗಳೂರು, ಅಂಡಮಾನ್, ನಿಕೋಬಾರ್ ಮುಂತಾದ ಕಡೆ 65 ದಿನಗಳ ಚಿತ್ರೀಕರಣ ಮಾಡಲಾಗಿದೆ.

ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ವಿನು ವೆಂಕಟೇಶ್ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಕನ್ನಡ, ತಮಿಳು, ತೆಲುಗು ಹಾಗೂ ಮಲೆಯಾಳಂ ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗಿದೆ.

ಅಂಬರೀಶ್ ಅವರ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಅರುಳ್ ವಿನ್ಸೆಂಟ್ ಅವರ ಛಾಯಾಗ್ರಹಣವಿದೆ. 'Wolf' ಚಿತ್ರವು ಮುಂದಿನ ವರ್ಷ ತೆರೆಗೆ ಬರಲಿದೆ. ಇದಲ್ಲದೆ ಶಿವರಾಜಕುಮಾರ್​ ಅಭಿನಯದಲ್ಲಿ 'ಘೋಸ್ಟ್​' ಎಂಬ ಚಿತ್ರವನ್ನೂ ಅವರು ನಿರ್ಮಿಸುತ್ತಿದ್ದಾರೆ.