ಸಿನಿವಾಣಿ

ಪೆಟ್ರೋಮ್ಯಾಕ್ಸ್​ಗೆ ಕುಂಬಳಕಾಯಿ; ಮಾರ್ಚ್​ಗೆ ಬರ್ತೀವಿ ಎನ್ನುತ್ತಿದ್ದಾರೆ ಸತೀಶ್

| ಸದೇಶ್ ಕಾರ್ಮಾಡ್ ಮೈಸೂರು

ಲಾಕ್​ಡೌನ್ ಸಡಿಲಗೊಳ್ಳುತ್ತಿದ್ದಂತೆ ಶೂಟಿಂಗ್​ಗೆ ಚಾಲನೆ ನೀಡಿ, ಇದೀಗ ಕೇವಲ 36 ದಿನಗಳಲ್ಲಿ ಇಡೀ ಚಿತ್ರದ ಚಿತ್ರೀಕರಣ ಮುಗಿಸಿಕೊಂಡಿದೆ ‘ಪೆಟ್ರೋಮ್ಯಾಕ್ಸ್’ ತಂಡ. ಕೆಲ ತಿಂಗಳ ಹಿಂದೆ ಅರಮನೆ ನಗರಿ ಮೈಸೂರಿನಲ್ಲಿ ಶುರು ಮಾಡಿ ಇದೀಗ ಅಲ್ಲಿಯೇ ಕುಂಬಳಕಾಯಿ ಒಡೆದುಕೊಂಡಿದೆ. ಅಷ್ಟೇ ಅಲ್ಲ ಚಿತ್ರವನ್ನು ಶೀಘ್ರದಲ್ಲಿ ಚಿತ್ರಮಂದಿರಕ್ಕೆ ತರಲಿದ್ದೇವೆ ಎಂದೂ ನಿರ್ದೇಶಕ ವಿಜಯ್ ಪ್ರಸಾದ್ ಸುಳಿವು ನೀಡಿದ್ದಾರೆ.

ಸಹಜವಾಗಿ ವಿಜಯ್ ಪ್ರಸಾದ್ ಸಿನಿಮಾ ಎಂದರೆ ಅಲ್ಲಿ ಡಬಲ್ ಮೀನಿಂಗ್ ಡೈಲಾಗ್ ಸಹಜ ಎಂಬ ಮಾತಿದೆ. ಆ ಬಗ್ಗೆಯೇ ಹೆಚ್ಚು ಮಾತನಾಡಿರುವ ನಿರ್ದೇಶಕರು, ‘ಡಬಲ್ ಮೀನಿಂಗ್ ಎಂಬುದಕ್ಕಿಂತ ನಾನದನ್ನು ಚೇಷ್ಟೆ ಎನ್ನುತ್ತೇನೆ. ಇಡೀ ಸಿನಿಮಾ ಡಬಲ್ ಮೀನಿಂಗ್ ಇದ್ದಿದ್ದರೆ, ‘ನೀರ್​ದೋಸೆ’ ಸಿನಿಮಾ ಸೋಲಬೇಕಿತ್ತು. ಆದರೆ, ಅದೆಲ್ಲವನ್ನು ಹೊರತುಪಡಿಸಿ ಅದರಲ್ಲೊಂದು ಗಾಢವಾದ ಕಥೆ ಇತ್ತು. ಹಾಗಾಗಿ ಜನರಿಂದ ಮೆಚ್ಚುಗೆ ಪಡೆಯಿತು’ ಎನ್ನುತ್ತಾರವರು.

ನಿರ್ದೇಶಕರು ಕೇವಲ 8 ದಿನಗಳಲ್ಲಿ ಪೆಟ್ರೋಮ್ಯಾಕ್ಸ್ ಸ್ಕ್ರಿಪ್ಟ್ ರೆಡಿ ಮಾಡಿದರು ಎಂದ ಸತೀಶ್ ನೀನಾಸಂ, ‘ಎರಡು ಸಿನಿಮಾ ಕೆಲಸಗಳ ನಡುವೆ ಮತ್ತೊಂದು ಸಿನಿಮಾ ಮಾಡುವ ಮನಸು ವಿಜಯ್ ಪ್ರಸಾದ್ ಅವರಿಗಿರಲಿಲ್ಲ. ಮಾಡುವ ಬಗ್ಗೆ ಒತ್ತಾಯಿಸಿದೆ. ಪುಸಲಾಯಿಸಿದೆ. ಅದಾದ ಬಳಿಕ ಎಂಟೇ ದಿನದಲ್ಲಿ ಚಿತ್ರದ ಸ್ಕ್ರಿಪ್ಟ್ ಸಿದ್ಧವಾಯ್ತು. 36 ದಿನಗಳಲ್ಲಿ ಶೂಟಿಂಗ್ ಸಹ ಮುಗಿಸಿದ್ದೇವೆ’ ಎಂಬುದು ಸತೀಶ್ ಮಾತು.

ಸಿನಿಮಾ ಕರಿಯರ್​ನಲ್ಲಿ ಈ ಹಿಂದೆಂದೂ ಮಾಡದ ವಿಶೇಷ ಪಾತ್ರದಲ್ಲಿ ಹರಿಪ್ರಿಯಾ ‘ಪೆಟ್ರೋಮ್ಯಾಕ್ಸ್’ನಲ್ಲಿ ಕಾಣಿಸಿಕೊಂಡರೆ, ಕಾರುಣ್ಯಾ ರಾಮ್ ಸಹ ತಾವು ಪೋಷಿಸಿದ ಪಾತ್ರದ ಬಗ್ಗೆ ಹೆಮ್ಮೆ ಇದೆ ಎನ್ನುತ್ತಾರೆ. ಅರುಣ್, ನಾಗಭೂಷಣ್, ಹಿರಿಯ ನಟಿ ವಿಜಯಲಕ್ಷ್ಮೀ ಸಿಂಗ್ ಚಿತ್ರದಲ್ಲಿದ್ದಾರೆ. ಸತೀಶ್ ಪಿಕ್ಚರ್ಸ್, ಸ್ಟುಡಿಯೋ 18, ಪೆಟ್ರೊಮ್ಯಾಕ್ಸ್ ಪಿಕ್ಚರ್ಸ್ ನಿರ್ಮಾಣ ಮಾಡಿರುವ ಈ ಸಿನಿಮಾಕ್ಕೆ ಅನೂಪ್ ಸೀಳಿನ್ ಸಂಗೀತ ನೀಡಿದ್ದು, ಫೆಬ್ರವರಿ ಅಥವಾ ಮಾರ್ಚ್ ನಲ್ಲಿ ಈ ಸಿನಿಮಾ ತೆರೆಗೆ ಬರಲಿದೆ.