ಸಿನಿವಾಣಿ

ಭಜರಂಗಿ 2 ಎಂಬ ಶಕ್ತಿ; ಬಿಡುಗಡೆಯ ಟೆನ್ಷನ್​ನಲ್ಲಿ ಶಿವರಾಜಕುಮಾರ್

ಶಿವರಾಜಕುಮಾರ್ ಚಿತ್ರಜೀವನದಲ್ಲಿ ಹೀಗಾಗುತ್ತಿರುವುದು ಇದೇ ಮೊದಲು. ಈ ಹಿಂದೆ ಯಾವತ್ತೂ, ಅವರ ಚಿತ್ರಗಳ ನಡುವೆ ಇಷ್ಟೊಂದು ಗ್ಯಾಪ್ ಬಂದಿರಲಿಲ್ಲ. ಆದರೆ, ಇದೇ ಮೊದಲ ಬಾರಿಗೆ ಕರೊನಾದಿಂದಾಗಿ ಶಿವಣ್ಣ ಅಭಿನಯದ ಚಿತ್ರವೊಂದು ಬಿಡುಗಡೆಯಾಗಿ ಒಂದೂವರೆ ವರ್ಷಗಳಾಗಿವೆ. 2020ರ ಮಾರ್ಚ್​ನಲ್ಲಿ ‘ದ್ರೋಣ’ ಬಿಡುಗಡೆಯಾಗಿತ್ತು. ಅದಾದ ಮೇಲೆ ಇಂದು ‘ಭಜರಂಗಿ 2’ ಬಿಡುಗಡೆಯಾಗುತ್ತಿದೆ. ದೊಡ್ಡ ಗ್ಯಾಪ್ ಆಗಿರುವುದರಿಂದ, ಕುತೂಹಲದ ಜತೆಗೆ ಒಂದು ಸಣ್ಣ ಟೆನ್ಶನ್ ಸಹ ಇದೆ ಎನ್ನುತ್ತಾರೆ ಶಿವರಾಜಕುಮಾರ್. ‘ಒಂದು ಕಡೆ ಚಿತ್ರಮಂದಿರಗಳು ಪ್ರಾರಂಭವಾಗಿ, ಎಲ್ಲವೂ ಸಹಜ ಸ್ಥಿತಿಗೆ ಬರುತ್ತಿರುವುದರಿಂದ ಖುಷಿ ಇದೆ. ಅದರ ಜತೆಗೆ, ಚಿತ್ರವನ್ನು ಜನ ಹೇಗೆ ಸ್ವೀಕರಿಸುತ್ತಾರೆ ಎಂಬ ಭಯವೂ ಇದೆ. ಟ್ರೇಲರ್​ಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಅದೇ ತರಹ ಚಿತ್ರಕ್ಕೆ ಹೇಗೆ ಕನೆಕ್ಟ್ ಆಗುತ್ತಾರೆ ಎಂಬ ಕುತೂಹಲವಿದೆ. ಏಕೆಂದರೆ, ಇದೊಂದು ಆಕ್ಷನ್-ಫ್ಯಾಂಟಸಿ ಚಿತ್ರ. ಇದುವರೆಗೂ ನಾನು ಇಂಥದ್ದೊಂದು ಪ್ರಯತ್ನ ಮಾಡಿರಲಿಲ್ಲ. ಇದೇ ಮೊದಲ ಬಾರಿಗೆ ಈ ಪ್ರಯೋಗ ಮಾಡುತ್ತಿರುವುದರಿಂದ ಜನ ಹೇಗೆ ಸ್ವೀಕರಿಸುತ್ತಾರೆ ಎಂದು ಟೆನ್ಶನ್ ಇದೆ’ ಎನ್ನುತ್ತಾರೆ ಶಿವರಾಜಕುಮಾರ್.

ಮನುಷ್ಯ ವರ್ಸಸ್ ಪ್ರಕೃತಿ: ಕಲಾವಿದರು ಚೆನ್ನಾಗಿ ಅಭಿನಯಿಸಿದ್ದಾರೆ, ಗ್ರಾಫಿಕ್ಸ್ ಚೆನ್ನಾಗಿದೆ, ಚಿತ್ರ ಅದ್ಧೂರಿಯಾಗಿ ಮೂಡಿಬಂದಿದೆ ... ಎಂಬುದರ ಹೊರತಾಗಿ ಸಾಕಷ್ಟು ಮೌಲ್ಯಗಳಿವೆ ಎನ್ನುವುದು ಅವರ ಅಭಿಪ್ರಾಯ. ‘ಸರಳವಾಗಿ ಹೇಳಬೇಕೆಂದರೆ ಮನುಷ್ಯ ಮತ್ತು ಪ್ರಕೃತಿಯ ನಡುವೆ ನಡೆಯುವಂತಹ ಸಿನಿಮಾ ಇದು. ಪ್ರಕೃತಿ ಎಷ್ಟು ಮುಖ್ಯ ಎಂದು ರ್ಚಚಿಸುವ ಚಿತ್ರ ಇದು. ಪ್ರಕೃತಿ ಇಲ್ಲದೆ ಜೀವನ ಇಲ್ಲ. ಇಲ್ಲಿ ಭಜರಂಗಿ ಎನ್ನುವುದು ಒಂದು ಶಕ್ತಿ. ಆ ಶಕ್ತಿ ಏನೆಲ್ಲಾ ಎದುರಿಸುತ್ತದೆ ಎನ್ನುವುದೇ ಚಿತ್ರದ ಕಥೆ’ ಎನ್ನುವ ಶಿವರಾಜಕುಮಾರ್, ಹೆಸರಿನ ಹೊರತಾಗಿ ‘ಭಜರಂಗಿ’ಗೂ, ‘ಭಜರಂಗಿ 2’ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುತ್ತಾರೆ.

ರೋಷ, ಜವಾಬ್ದಾರಿ ಎಲ್ಲವೂ ಇದೆ: ‘ಚಿತ್ರ ಪ್ರಾರಂಭವಾಗುವಾಗ ನಾಯಕನ ಪಾತ್ರದ ಉದ್ದೇಶ ಏನಿರುತ್ತದೋ, ಕೊನೆಯವರೆಗೂ ಅದೇ ಇರುತ್ತದೆ. ಹರ್ಷ ಕಥೆ ಹೇಳಿದಾಗ, ಪಾತ್ರ ಬಹಳ ಇಷ್ಟವಾಯಿತು. ಪಾತ್ರಗಳ ಮೇಲೆ ಪ್ರೀತಿ ಬಂತು. ಆ ಪಾತ್ರದಲ್ಲಿ ಮುಗ್ಧತೆ ಇದೆ, ರೋಷ ಇದೆ, ಪ್ಯಾಶನ್, ಜವಾಬ್ದಾರಿ ಎಲ್ಲವೂ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ಅವನಿಗೊಂದು ಪವರ್ ಇದೆ. ಅದನ್ನು ಹೇಗೆ ಬಳಸಿಕೊಂಡು, ಅವನು ಮುಂದುವರೆಯುತ್ತಾನೆ ಎನ್ನುವುದು ಕಥೆ. ಒಂದು ದೊಡ್ಡ ಫಿಲಾಸಪಿಯನ್ನು ಸಾಮಾನ್ಯ ಜನರಿಗೂ ಅರ್ಥವಾಗುವಂತೆ ಹರ್ಷ, ಆ ಪಾತ್ರದ ಮೂಲಕ ಹೇಳಿದ್ದಾರೆ’ ಎಂದು ಖುಷಿಯಾಗುತ್ತಾರೆ ಶಿವರಾಜಕುಮಾರ್. ಅಂತಿಮವಾಗಿ, ಈ ಚಿತ್ರ ಎಲ್ಲರಿಗೂ ಇಷ್ಟವಾಗಲಿ ಎಂದು ಪ್ರಾರ್ಥಿಸುತ್ತೇನೆ ಎನ್ನುವ ಶಿವರಾಜಕುಮಾರ್, ‘ಈ ಹಿಂದೆ ಬಿಡುಗಡೆಯಾದ ಸಿನಿಮಾಗಳಿಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ದೇವರ ದಯೆಯಿಂದ ಈ ಚಿತ್ರವು ಎಲ್ಲರಿಗೂ ಇಷ್ಟವಾಗಲಿ’ ಎಂದು ಮಾತು ಮುಗಿಸುತ್ತಾರೆ.

3 ಗಂಟೆಗಳಲ್ಲಿ ತೀರ್ಮಾನ: ಇಂಥದ್ದೊಂದು ಚಿತ್ರ ರೂಪುಗೊಳ್ಳುವುದಕ್ಕೆ ನಿರ್ವಪಕ ಜಯಣ್ಣಗೆ ಥ್ಯಾಂಕ್ಸ್ ಹೇಳಬೇಕು ಎನ್ನುತ್ತಾರೆ ಶಿವರಾಜ್​ಕುಮಾರ್. ‘ಅದೊಂದು ದಿನ ಸೆಟ್ ಸುಟ್ಟು ಹೋಯಿತು. ಮೂರು ಗಂಟೆಗಳಲ್ಲಿ ಇನ್ನೊಂದು ಹೊಸ ಸೆಟ್ ಹಾಕುವ ತೀರ್ವನಕ್ಕೆ ನಿರ್ವಪಕರು ಬಂದರು. ಚಿತ್ರೀಕರಣ ಮುಗಿದರೂ, ಕರೊನಾದಿಂದ ಬಿಡುಗಡೆ ಮಾಡುವುದಕ್ಕೆ ಆಗಲಿಲ್ಲ. ಆದರೂ ಕ್ರೇಜ್ ಕಡಿಮೆಯಾಗದಂತೆ ನೋಡಿಕೊಂಡಿದ್ದಾರೆ. ಚಿತ್ರವನ್ನು ಜನರಿಗೆ ಮುಟ್ಟಿಸುವಲ್ಲಿ ಇಡೀ ತಂಡ ಬಹಳ ಚೆನ್ನಾಗಿ ಕೆಲಸ ಮಾಡಿದೆ’ ಎಂದು ಒಪ್ಪಿಕೊಳ್ಳುತ್ತಾರೆ.