ಬೆಂಗಳೂರು: ಈ ವರ್ಷದ ಆರಂಭದಲ್ಲಿ 'ಶಂಭೋ ಶಿವ ಶಂಕರ' ಎಂಬ ಚಿತ್ರ ಸೆಟ್ಟೇರಿದ್ದು ನೆನಪಿರಬಹುದು. ಹೆಸರೇ ಹೇಳುವಂತೆ ಶಂಭು, ಶಿವ ಮತ್ತು ಶಂಕರ ಎಂಬ ಮೂರು ಯುವಕರ ಸುತ್ತ ಈ ಚಿತ್ರ ಸುತ್ತುತ್ತದೆ. ಈ ಚಿತ್ರದ ನಾಯಕರಲ್ಲೊಬ್ಬರಾದ ಅಭಯ್ ಪುನೀತ್ ಇತ್ತೀಚೆಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಈ ಸಂದರ್ಭದಲ್ಲಿ ಚಿತ್ರತಂಡವು ಟೀಸರ್ ಬಿಡುಗಡೆ ಮಾಡಿದೆ.
ಯೂಟ್ಯೂಬ್ನ ಆನಂದ್ ಆಡಿಯೋದಲ್ಲಿ 'ಶಂಭೋ ಶಿವ ಶಂಕರ' ಚಿತ್ರದ ಅಭಯ್ ಪುನೀತ್ ಪರಿಚಯಿಸುವ ಟೀಸರ್ ಬಿಡುಗಡೆಯಾಗಿದ್ದು, ಟೀಸರ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದ್ದು, ಕೊನೆಯ ಹಂತದ ಚಿತ್ರೀಕರಣ ಇಂದಿನಿಂದ ಆರಂಭವಾಗಲಿದೆ.
ಅಘನ್ಯ ಪಿಕ್ಚರ್ಸ್ ಲಾಂಛನದಲ್ಲಿ ವರ್ತೂರ್ ಮಂಜು ಅವರು ನಿರ್ಮಿಸುತ್ತಿರುವ 'ಶಂಭೋ ಶಿವ ಶಂಕರ' ಚಿತ್ರವನ್ನು ಶಂಕರ್ ಕೋನಮಾನಹಳ್ಳಿ ನಿರ್ದೇಶಿಸುತ್ತಿದ್ದಾರೆ. ನಿರ್ದೇಶನದ ಜತೆಗೆ ಕಥೆ, ಚಿತ್ರಕಥೆ, ಸಂಭಾಷಣೆಯ ಜವಾಬ್ದಾರಿಯನ್ನೂ ಅವರೇ ಹೊತ್ತಿದ್ದಾರೆ.
'ಶಂಭೋ ಶಿವ ಶಂಕರ' ಚಿತ್ರದಲ್ಲಿ ಅಭಯ್ ಪುನೀತ್, ರೋಹಿತ್ ಹಾಗೂ ರಕ್ಷಕ್ ನಾಯಕರಾಗಿ ನಟಿಸುತ್ತಿದ್ದು, ಅವರಿಗೆ ನಾಯಕಿಯಾಗಿ ಸೋನಾಲ್ ಮಾಂತೆರೋ ನಟಿಸುತ್ತಿದ್ದಾರೆ. ಅವರೊಂದಿಗೆ ಶಶಿಕುಮಾರ್, ಪ್ರದೀಪ್ ತಿಪಟೂರು, ಆಶಾ ಸುಜಯ್, ಪ್ರೇಮ, ರೋಹಿಣಿ, ಸಂಗಮೇಶ್, ಡಿ.ಸಿ.ತಮ್ಮಣ್ಣ ಮುಂತಾದವರು ನಟಿಸುತ್ತಿದ್ದಾರೆ. ಚಿತ್ರಕ್ಕೆ ಹಿತನ್ ಹಾಸನ್ ಸಂಗೀತ ಸಂಯೋಜಿಸಿದರೆ, ನಟರಾಜ್ ಮುದ್ದಾಲ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ.