1997ರಲ್ಲಿ ದೂರದರ್ಶನದಲ್ಲಿ ಶಕ್ತಿಮಾನ್’ ಧಾರಾವಾಹಿಯ ಪ್ರಸಾರ ಆರಂಭಿವಾಯಿತು. ತುಂಬಾ ಕಡಿಮೆ ಅವಧಿಯಲ್ಲಿ ಈ ಧಾರಾವಾಹಿ ಸಾಕಷ್ಟು ಜನಪ್ರಿಯತೆ ಗಳಿಸಿತ್ತು. ಆದರೆ, 2005ರಲ್ಲಿ ಈ ಧಾರಾವಾಹಿಯ ಪ್ರಸಾರ ನಿಲ್ಲಿಸಲಾಯಿತು. ಅಂದಹಾಗೆ, ನಟ ಮುಕೇಶ್ ಖನ್ನಾ ಅವರು ಈ ಧಾರಾವಹಿಯಲ್ಲಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಈ ಒಂದು ಧಾರಾವಾಹಿಯ ಮೂಲಕ ಅವರು ಇಡೀ ದೇಶದಲ್ಲಿ ಬಹಳಷ್ಟು ಖ್ಯಾತಿ ಪಡೆದರು. ಕೆಲವರು ‘ಶಕ್ತಿಮಾನ್’ ಕಾಪಾಡುತ್ತಾರೆ ಎಂದು ಕಟ್ಟಡದಿಂದ ಜಿಗಿಯುವ ಪ್ರಯತ್ನ ಮಾಡಿದ ಉದಾಹರಣೆಗಳು ಇದ್ದು, ಅವು ಸಾಕಷ್ಟು ಆತಂಕಕ್ಕೆ ಕೂಡಾ ಕಾರಣವಾದವು. ಸಂಕಷ್ಟದಲ್ಲಿರುವ ವ್ಯಕ್ತಿಗಳನ್ನು ರಕ್ಷಿಸುವ ಕೆಲಸವನ್ನು ಮಾಡುವವನೇ 'ಶಕ್ತಿಮಾನ್' ಎನ್ನುವ ಮಟ್ಟಕ್ಕೆ ಈ ಧಾರಾವಹಿ ಪ್ರಸಿದ್ಧವಾಯಿತು. ಅದರಲ್ಲಿಯೂ, 'ಶಕ್ತಿಮಾನ್' ಮಕ್ಕಳಿಗೆ ಸಖತ್ ಥ್ರಿಲ್, ಖುಷಿ ನೀಡುತ್ತಿತು.
ಇನ್ನು, ಈ ಧಾರಾವಾಹಿಯ ಒಟ್ಟೂ 520 ಸಂಚಿಕೆಗಳು ಪ್ರಸಾರವಾದವು. ಅಂತಹ, 'ಶಕ್ತಿಮಾನ್' ಧಾರಾವಾಹಿಯ ಶಕ್ತಿಮಾನ್ ಪಾತ್ರ ಈಗ ಸಿನಿಮಾ ಆಗಿ ಬೆಳ್ಳಿ ತೆರೆಗೆ ಬರೋಕೆ ಸಜ್ಜಾಗಿದೆ. ಈ ವಿಚಾರ ಕೇಳಿ ಶಕ್ತಿಮಾನ್ ಅಭಿಮಾನಿಗಳು ಖುಷಿಯಾಗಿದ್ದಾರೆ. ಹೌದು, ಗುರುವಾರ ಸಂಜೆ ‘ಸೋನಿ ಪಿಕ್ಚರ್ಸ್ ಇಂಡಿಯಾ’ ಈ ಬಗ್ಗೆ ಘೋಷಣೆ ಮಾಡಿದೆ. ಟ್ವಿಟರ್ನಲ್ಲಿ ಈ ಖುಷಿ ವಿಚಾರವನ್ನು ಸೋನಿ ನಿರ್ಮಾಣ ಸಂಸ್ಥೆ ಹಂಚಿಕೊಂಡಿದೆ. ಒಂದು ಸಣ್ಣ ವಿಡಿಯೋದಲ್ಲಿ ಸೂಪರ್ ಹೀರೋ ಧರಿಸಿರುವ ಲೋಗೋ ತೋರಿಸಲಾಗಿದೆ. ಆದರೆ, ಮುಕೇಶ್ ಅವರು ಮಿಂಚಿದ ಪಾತ್ರದಲ್ಲಿ ಯಾರು ಕಾಣಿಸಲಿದ್ದಾರೆ ಎನ್ನುವ ಕುತೂಹಲ ಹಲವರಲ್ಲಿ ಮೂಡಿದೆ. ಈ ಹಿಂದೆ 2020ರ ಒಂದು ಸಂದರ್ಶನದಲ್ಲಿ ಮಾತನಾಡಿದ್ದ ನಟ ಮುಕೇಶ್ ಅವರು ಈ ಪಾತ್ರ ಶೀಘ್ರ ವೇ ಸಿನಿಮಾ ಆಗಲಿದೆ ಎಂಬ ಸಣ್ಣ ಹಿಂಟ್ ಅಭಿಮಾನಿಗಳಿಗೆ ಕೊಟ್ಟಿದ್ದರು.