ಬಾಲಿವುಡ್ ಬಾದ್ಶಾ ಸಿನಿಮಾ ಮಾಡದೆ ಎರಡು ವರ್ಷಗಳಾದವು. ಜೀರೋ ಸಿನಿಮಾ ಪ್ಲಾಪ್ ಆದ ಬಳಿಕ ಬೇರಾವ ಚಿತ್ರ ಒಪ್ಪಿಕೊಳ್ಳದೆ, ಸುದೀರ್ಘ ಎರಡು ವರ್ಷ ನಟನೆಯಿಂದ ಹಿಂದೆ ಸರಿದಿದ್ದರು. ನಿರ್ಮಾಣ ಸೇರಿ ಹಲವು ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಇಷ್ಟೆಲ್ಲ ಆದರೂ ಅಭಿಮಾನಿಗಳು ಮಾತ್ರ, ಶಾರುಖ್ ಸಿನಿಮಾ ಘೋಷಣೆಗಾಗಿ ಕಾಯುತ್ತಿದ್ದಾರೆ. ಇನ್ನೇನು ನ. 2ರಂದು ಶಾರುಖ್ ಜನ್ಮದಿನ ಬಂದೇ ಬಿಟ್ಟಿದೆ. ಹಬ್ಬದಂತೆ ಹುಟ್ಟುಹಬ್ಬ ಆಚರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಸೋಮವಾರ ಶಾರುಖ್ 55ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಅವರ ಆ ಸಂಭ್ರಮದ ಕ್ಷಣಕ್ಕೆ ಅವರ ಅಭಿಮಾನಿಗಳು ವಿಶೇಷ ಪಾರ್ಟಿಯೊಂದನ್ನು ಆಯೋಜನೆ ಮಾಡಿದ್ದಾರೆ. ಇಲ್ಲಿಯವರೆಗೂ ಶಾರುಖ್ ಜನ್ಮದಿನ ಅಂದ ಬಳಿಕ ಬಾಂದ್ರಾದಲ್ಲಿನ ಮನ್ನತ್ ಮನೆಯ ಬಾಲ್ಕನಿ ಮೇಲೆ ನಿಂತು ಸಾವಿರಾರು ಅಭಿಮಾನಿಗಳಿಗೆ ಕೈ ಬೀಸಿ ದರ್ಶನ ಕೊಡುತ್ತಿದ್ದರು. ಇದೀಗ ಕರೊನಾ ಹಿನ್ನೆಲೆಯಲ್ಲಿ ಆ ಸಂಭ್ರಮವನ್ನು ವರ್ಚುವಲ್ ಮೂಲಕ ಆಚರಿಸಲು ಫ್ಯಾನ್ಸ್ ನಿರ್ಧರಿಸಿದ್ದಾರೆ.
ಸದ್ಯ ಶಾರುಖ್ ಕುಟುಂಬದ ಜತೆ ದುಬೈನಲ್ಲಿದ್ದಾರೆ. ಬರ್ತಡೇ ನಿಮಿತ್ತ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದ ಅವರು, ‘ಈ ಸಲದ ನಿಮ್ಮ ಪ್ರೀತಿಯನ್ನು ಕೊಂಚ ದೂರದಿಂದಲೇ ಸ್ವೀಕರಿಸಲಿದ್ದೇನೆ’ ಎಂದಿದ್ದಾರೆ. ಅಷ್ಟೇ ಅಲ್ಲ ಕೇಕ್ ಕಟಿಂಗ್ ಆಚರಣೆಯನ್ನು ವಿಶ್ವದಾದ್ಯಂತ ಎಲ್ಲೆಂದರಲ್ಲಿ ಕಣ್ತುಂಬಿಕೊಳ್ಳಬಹುದು. ನಿಮ್ಮ ಮನೆಯಲ್ಲಿ ನೀವೇ ಕೇಕ್ ಕಟ್ ಮಾಡಿ ಬಾದ್ಶಾ ಜನ್ಮದಿನವನ್ನು ಆಚರಿಸಿಕೊಳ್ಳಬಹುದು. ಇದೆಲ್ಲವನ್ನು ಲೈಚವ್ ಸ್ಟ್ರೀಮಿಂಗ್ ಮಾಡಲು ಅಭಿಮಾನಿ ಬಳಗ ಜವಾಬ್ದಾರಿ ವಹಿಸಿಕೊಂಡಿದೆ.
ಇದನ್ನೂ ಓದಿ: ಗೌತಮ್ ಜತೆಗೆ ಸಪ್ತಪದಿ ತುಳಿದ ಕಾಜಲ್ ಅಗರ್ವಾಲ್ …
ಇದರ ಜತೆಗೆ ಶಾರುಖ್ ಫ್ಯಾನ್ ಕ್ಲಬ್ ವತಿಯಿಂದ 5555 ಮಾಸ್ಕ್, ಸ್ಯಾನಿಟೈಸರ್, ಮತ್ತು ಅನಾತಾಶ್ರಮಗಳಿಗೆ, ವೃದ್ಧಾಶ್ರಮಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಇನ್ನೊಂದೆಡೆ ಶಾರುಖ್ ಸದ್ಯ ಹಲವು ಸಿನಿಮಾ ಒಪ್ಪಿಕೊಂಡಿದ್ದು, ಆ ಸಿನಿಮಾ ತಂಡಗಳಿಂದಲೂ ಸಿನಿಮಾ ಪೋಸ್ಟರ್ ಬರುವ ಸಾಧ್ಯತೆ ಇದೆ. (ಏಜೆನ್ಸೀಸ್)