More

    ವಾರ ಮೂರು; ಜನರೂ ಇಲ್ಲ.. ಹೊಸ ಚಿತ್ರಗಳೂ ಇಲ್ಲ!

    ಬೆಂಗಳೂರು: ‘ಜಂಟಲ್​ವ್ಯಾನ್’, ‘ರಂಗಿತರಂಗ’ ಮತ್ತು ‘ರಂಗನಾಯಕಿ’ … ಶುಕ್ರವಾರ ಮರುಬಿಡುಗಡೆಯಾದ ಚಿತ್ರಗಳು ಇವು. ಕಳೆದ ಎರಡು ವಾರಗಳಿಗೆ ಹೋಲಿಸಿದರೆ, ಈ ವಾರ ಮರುಬಿಡುಗಡೆಯಾದ ಚಿತ್ರಗಳ ಸಂಖ್ಯೆ ಕಡಿಮೆಯಷ್ಟೇ ಅಲ್ಲ, ಚಿತ್ರಮಂದಿರಗಳಲ್ಲಿ ಚಿತ್ರ ನೋಡುತ್ತಿರುವ ಪ್ರೇಕ್ಷಕರ ಸಂಖ್ಯೆ ಬಹಳ ಕಡಿಮೆಯಾಗುತ್ತಿದೆ. ಅದಕ್ಕೆ ಕಾರಣ, ಇದುವರೆಗೂ ಬಿಡುಗಡೆಯಾದ ಚಿತ್ರಗಳೆಲ್ಲವೂ, ಈಗಾಗಲೇ ಒಮ್ಮೆ ಬಿಡುಗಡೆಯಾದಂತವು. ಮೇಲಾಗಿ ಟಿವಿ ಮತ್ತು ಒಟಿಟಿಗಳಲ್ಲಿ ಪ್ರದರ್ಶನ ಕಂಡಿವೆ. ಜನ ಈ ಚಿತ್ರಗಳನ್ನು ಈಗಾಗಲೇ ನೋಡಿರುವುದರಿಂದ ಚಿತ್ರಮಂದಿರಗಳತ್ತ ಇನ್ನೂ ಪೂರ್ಣಪ್ರಮಾಣದಲ್ಲಿ ಬರುತ್ತಿಲ್ಲ ಎನ್ನಬಹುದು.

    ಹೊಸ ಚಿತ್ರಗಳ ಅವಶ್ಯಕತೆ ಇದೆ: ಜನರಿಗೆ ತುರ್ತಾಗಿ ಬೇಕಾಗಿರುವುದು ಏನು ಗೊತ್ತಾ? ಒಂದಿಷ್ಟು ಹೊಸ ಚಿತ್ರಗಳು. ಅದರಲ್ಲೂ ಸ್ಟಾರ್​ಗಳ ಹೊಸ ಚಿತ್ರಗಳು. ಇದು ನಿರ್ಮಾಪಕರಿಗೂ ಗೊತ್ತಿದೆ. ಆದರೆ, ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡುವ ಸ್ಥಿತಿಯಲ್ಲಿ ಅವರುಗಳು ಸದ್ಯಕ್ಕೆ ಇಲ್ಲ. ಅದೇ ಕಾರಣಕ್ಕೆ, 50ಕ್ಕೂ ಹೆಚ್ಚು ಹೊಸ ಚಿತ್ರಗಳು ಸೆನ್ಸಾರ್ ಆಗಿ ಬಿಡುಗಡೆಯಾಗುವುದಕ್ಕೆ ಸಜ್ಜಾದ್ದರೂ, ಕಳೆದೆರಡು ವಾರಗಳಲ್ಲಿ ಯಾವ ಹೊಸ ಚಿತ್ರ ಬಿಡುಗಡೆ ಆಗಿಲ್ಲ. ಅಷ್ಟೇ ಅಲ್ಲ, ಇನ್ನೊಂದೆರಡು ವಾರಗಳ ಕಾಲ ಬಿಡುಗಡೆಯಾಗುವುದು ಸಹ ಸಂಶಯವೇ. ಇದು ಬರೀ ಕನ್ನಡದಲ್ಲಷ್ಟೇ ಅಲ್ಲ, ಬೇರೆ ಭಾಷೆ ಮತ್ತು ರಾಜ್ಯದ ಚಿತ್ರರಂಗಗಳಲ್ಲೂ ಇದೇ ಪರಿಸ್ಥಿತಿ ಇದೆ. ಆದರೆ, ಕೆಲವು ಕಡೆಗಳಲ್ಲಿ ಒಟಿಟಿಯಲ್ಲಿ ಬಿಡುಗಡೆಯಾದ ಹೊಸ ಚಿತ್ರಗಳನ್ನಾದರೂ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗಿದೆ.

    ನಿರ್ಮಾಪಕರ ಪಾಲಿಗೆ ದೊಡ್ಡ ರಿಸ್ಕ್: ದೊಡ್ಡ ಚಿತ್ರಗಳ ನಿರ್ಮಾಪಕರು ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡುವುದಕ್ಕೆ ಹಿಂದೇಟು ಹಾಕುತ್ತಿರುವುದಕ್ಕೂ ಕಾರಣವಿದೆ. ಏಕೆಂದರೆ, ಸದ್ಯ ಶೇ. 50ರಷ್ಟು ಜನರಿಗೆ ಮಾತ್ರ ಚಿತ್ರ ಪ್ರದರ್ಶನ ಮಾಡಬೇಕು. ಮೇಲಾಗಿ ಚಿತ್ರಮಂದಿರಗಳ ಮತ್ತು ಪ್ರದರ್ಶನಗಳ ಸಂಖ್ಯೆ ಸಹ ಬಹಳ ಕಡಿಮೆ ಇದೆ. ಹಾಗಾಗಿ ಚಿತ್ರಮಂದಿರಗಳನ್ನೇ ನಂಬಿರುವ ನಿರ್ವಪಕರು ಬಿಡುಗಡೆಗೆ ಸಕಾಲವಲ್ಲ ಎನ್ನುತ್ತಿದ್ದಾರೆ. ಒಂದು ಪಕ್ಷ ಚಿತ್ರ ಬಿಡುಗಡೆಯಾಗಿ, ಪ್ರೇಕ್ಷಕರು ಒಳ್ಳೆಯ ಮಾತಾಡಿದರೆ, ಆಗ ಜನ ಹೆಚ್ಚಿನ ಸಂಖ್ಯೆಯಲ್ಲಿ ಬರಬಹುದು. ಒಂದು ಪಕ್ಷ ಚೆನ್ನಾಗಿಲ್ಲದಿದ್ದರೆ, ಆಗ ಬರುವ ಜನ ಸಹ ಬರುವುದಿಲ್ಲ. ಹಾಗಾಗಿ ಬಹಳಷ್ಟು ನಿರ್ವಪಕರು ಚಿತ್ರಗಳನ್ನು ಸಿದ್ಧವಿಟ್ಟುಕೊಂಡಿದರೂ, ಬಿಡುಗಡೆ ಮಾಡುವುದಕ್ಕೆ ಮನಸ್ಸು ಮಾಡುತ್ತಿಲ್ಲ.

    ಹಾಗಾದರೆ ಪರಿಹಾರ?: ಬಹುಶಃ ಹೆಚ್ಚು ಬಂಡವಾಳವಿಲ್ಲದ ಮತ್ತು ಈಗಾಗಲೇ ಸೇಫ್ (ಓಟಿಟಿಗೆ ಅಥವಾ ಟಿವಿ ಹಕ್ಕುಗಳು ಮಾರಾಟವಾದ) ಆದ ಚಿತ್ರಗಳು ಬಿಡುಗಡೆಯಾದರೆ, ಬಹುಶಃ ಪರಿಸ್ಥಿತಿ ಸುಧಾರಿಸಬಹುದೇನೋ? ಈಗಾಗಲೇ ಓಟಿಟಿಗಳಲ್ಲಿ ಬಿಡುಗಡೆಯಾಗಿರುವ ಕೆಲವು ಚಿತ್ರಗಳನ್ನು ಬಿಡುಗಡೆ ಮಾಡಿದರೆ, ಅಲ್ಲಿ ನೋಡದಿರುವ ಪ್ರೇಕ್ಷಕರು ಚಿತ್ರಮಂದಿರಗಳಲ್ಲಿ ಕಣ್ತುಂಬಿಕೊಳ್ಳುವ ಸಾಧ್ಯತೆ ಇರುತ್ತವೆ. ಹಾಗಾಗಿ, ಪ್ರೇಕ್ಷಕರನ್ನು ಸೆಳೆಯುವುದಕ್ಕೆ ಇಂಥ ಚಿತ್ರಗಳ ಅವಶ್ಯಕತೆ ಹೆಚ್ಚಿದೆ. ಇಂಥ ಸಂದರ್ಭದಲ್ಲಿ ಈ ತರಹದ ಸಿನಿಮಾಗಳು ಹೆಚ್ಚು ಬಿಡುಗಡೆಯಾದರೆ, ಕ್ರಮೇಣ ಮುಂದಿನ ದಿನಗಳಲ್ಲಿ ಜನ ಬರುವುದಷ್ಟೇ ಅಲ್ಲ, ಅದರಿಂದ ನಿರ್ವಪಕರು ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡುವ ಧೈರ್ಯ ತೋರಿಸಬಹುದೇನೋ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts