ಮುಂಬೈ: ತಮಿಳಿನ ಖ್ಯಾತ ನಿರ್ದೇಶಕ ಅಟ್ಲಿ ಮತ್ತು ಬಾಲಿವುಡ್ ಬಾದ್ಶಾ ಶಾರುಖ್ ಖಾನ್ ಕಾಂಬಿನೇಷನ್ನಲ್ಲಿ ಸಿನಿಮಾ ತಯಾರಾಗಲಿದೆ ಎಂಬ ಸುದ್ದಿ ಹರಿದಾಡಿದ್ದಾಗ ಅಭಿಮಾನಿ ವಲಯದಲ್ಲಿ ಮನೆ ಮಾಡಿದ್ದ ಸಂಭ್ರಮ ಅಷ್ಟಿಷ್ಟಲ್ಲ. ಕಳೆದ ವರ್ಷವೇ ಈ ಜೋಡಿಯ ಸಿನಿಮಾ ಸೆಟ್ಟೇರಲಿದೆ ಎನ್ನಲಾಗುತ್ತಿದೆಯಾದರೂ ಇದೂವರೆಗೂ ಆ ಬಗ್ಗೆ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಇದೀಗ ಅದೆಲ್ಲದಕ್ಕೂ ಉತ್ತರ ಸಿಕ್ಕಿದೆ. ಜತೆಗೆ ಶಾರುಖ್ ನಿಭಾಯಿಸಲಿರುವ ಪಾತ್ರದ ಬಗ್ಗೆಯೂ!
ಹೌದು, ಅಟ್ಲಿ ಮತ್ತು ಶಾರುಖ್ ಸಿನಿಮಾ ಮುಂದಿನ ವರ್ಷದ ಆರಂಭದಲ್ಲಿ ಶುರುವಾಗಲಿದೆಯಂತೆ. ಈ ಸಿನಿಮಾದಲ್ಲಿ ಶಾರುಖ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಇದೀಗ ಅಭಿಮಾನಿ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಅಟ್ಲಿ ನಿರ್ದೇಶನದ ಸಿನಿಮಾಗಳಲ್ಲಿ ದ್ವಿಪಾತ್ರ ಮತ್ತು ತ್ರಿಪಾತ್ರಗಳೇ ಹೈಲೈಟ್. ಇದೀಗ ಆ ಪ್ರಯೋಗ ಶಾರುಖ್ ಸಿನಿಮಾದಲ್ಲಿಯೂ ಆಗಲಿದೆ ಎಂದೇ ಹೇಳಲಾಗುತ್ತಿದೆ.
ಸದ್ಯಕ್ಕೆ ವಾರ್ ಸಿನಿಮಾ ನಿರ್ದೇಶಕ ಸಿದ್ಧಾರ್ಥ್ ಆನಂದ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ಸಿನಿಮಾದಲ್ಲಿ ಶಾರುಖ್ ಬಿಜಿಯಾಗಿದ್ದಾರೆ. ಇತ್ತ ರಾಜ್ಕುಮಾರ್ ಹಿರಾನಿ ಸಿನಿಮಾದಲ್ಲೂ ಶಾರುಖ್ ನಟಿಸಲಿದ್ದಾರೆ ಎಂಬ ಸುದ್ದಿ ಇದೆಯಾದರೂ, ಕಥೆ ವಿಚಾರವಾಗಿ ರಾಜ್ಕುಮಾರ್ ಕೆಲಸ ಮುಂದುವರಿಸಿದ್ದಾರೆ. ಹಾಗಾಗಿ 2021ಕ್ಕೆ ಅಟ್ಲಿ ನಿರ್ದೇಶನದ ಸಿನಿಮಾ ಸೆಟ್ಟೇರುವುದು ಖಚಿತ ಎನ್ನಲಾಗುತ್ತಿದೆ.
ಅಟ್ಲಿ ಸಿನಿಮಾದಲ್ಲಿ ಶಾರುಖ್ಗೆ ಜೋಡಿಯಾಗಿ ಮತ್ತೆ ದೀಪಿಕಾ ಪಡುಕೋಣೆ ನಟಿಸುವುದು ಅಧಿಕೃತ ಎಂಬ ಮಾತು ಬಿಟೌನ್ ಅಂಗಳದಿಂದ ಕೇಳಿಬರುತ್ತಿದೆ. ದೀಪಿಕಾ ಅವರನ್ನು ಬಾಲಿವುಡ್ಗೆ ಪರಿಚಯಿಸಿದ್ದೇ ಶಾರುಖ್ ಖಾನ್. ಓಂ ಶಾಂತಿ ಓಂ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ದೀಪಿಕಾ ಎಂಟ್ರಿ ಪಡೆದಿದ್ದರು. ಇದೀಗ ಮತ್ತೆ ಶಾರುಖ್ ಜತೆ ನಟಿಸುವ ಸಾಧ್ಯತೆ ಇದ್ದು, ಹಿಂದಿ ಜತೆಗೆ ತಮಿಳಿಗೂ ಈ ಚಿತ್ರ ಡಬ್ ಆಗಲಿದೆ.
ಅಂದಹಾಗೆ, ಆ ಚಿತ್ರಕ್ಕೆ ಸ್ವತಃ ಶಾರುಖ್ ಬಂಡವಾಳ ಹೂಡಲಿದ್ದಾರೆ. ಹೋಮ್ ಬ್ಯಾನರ್ ರೆಡ್ಚಿಲ್ಲೀಸ್ ಎಂಟರ್ಟೈನ್ಮೆಂಟ್ ಬ್ಯಾನರ್ನಲ್ಲಿ ಸಿನಿಮಾ ತಯಾರಾಗಲಿದೆ.