ಮುಂಬೈ: ಈ ವರ್ಷದ ಆರಂಭದಲ್ಲೇ ಆ ಘಟನೆಯಿಂದ ಇಡೀ ದೇಶವೇ ಬೆಚ್ಚಿ ಬಿದ್ದಿತ್ತು. ದೆಹಲಿಯಲ್ಲಿ ನಡೆದ ಧಾರುಣವಾದ ಹಿಟ್ ಅಂಡ್ ರನ್ ಪ್ರಕರಣದಲ್ಲಿ ಮೃತಪಟ್ಟಿದ್ದ ಅಂಜಲಿ ಸಿಂಗ್ ಎಂಬ ಯುವತಿಯ ಕುಟುಂಬಕ್ಕೆ ಶಾರುಖ್ ಖಾನ್ ಸಹಯಾಹಸ್ತ ಚಾಚಿದ್ದಾರೆ. ತಮ್ಮ ಎನ್ಜಿಓ ಮೂಲಕ ಧನ ಸಹಾಯ ಮಾಡಿದ್ದಾರೆ.
ರಾಜಧಾನಿ ದೆಹಲಿಯಲ್ಲಿ ಹೊಸ ವರ್ಷದ ರಾತ್ರಿ ಕಾರು ಮತ್ತು ಸ್ಕೂಟಿ ನಡುವೆ ಅಪಘಾತ ಸಂಭವಿಸಿತ್ತು. ಈ ಅಪಘಾತದಲ್ಲಿ ಅಂಜಲಿ ಸಿಂಗ್ ಎಂಬ ಯುವತಿ ಕಾರಿನಡಿ ಸಿಲುಕಿದ್ದಳು. ಇದನ್ನು ಗಮನಿಸದ ಚಾಲಕನು ಸುಮಾರು 12 ಕಿಲೋಮೀಟರ್ ಕಾರು ಓಡಿಸಿದ್ದರಿಂದ, ಅಂಜಲಿ ಧಾರುಣವಾಗಿ ಮೃತಪಟ್ಟಿದ್ದಳು. ಸಂಕಷ್ಟದಲ್ಲಿರುವ ಅಂಜಲಿ ಕುಟುಂಬಕ್ಕೆ ಶಾರುಖ್ ಅವರ ಮೀರ್ ಫೌಂಡೇಶನ್ ಸಹಾಯ ಮಾಡಿದೆ.
ಶಾರುಖ್ ಖಾನ್ ತಮ್ಮ ತಂದೆ ಮೀರ್ ತಾಜ್ ಮೊಹಮ್ಮದ್ ಖಾನ್ ಅವರ ಹೆಸರಲ್ಲಿ 2013ರಲ್ಲಿ ಒಂದು ಫೌಂಡೇಶನ್ ಸ್ಥಾಪಿಸಿದ್ದಾರೆ. ಈ ಮೂಲಕ ಸಂಕಷ್ಟದಲ್ಲಿರುವವರಿಗೆ ತಮ್ಮದೇ ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ. ಅದರಲ್ಲೂ ಸಂಕಷ್ಟದಲ್ಲಿರುವ ಮಹಿಳೆಯರ ಕುಟುಂಬಗಳಿಗೆ ತಮ್ಮದೇ ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ. ಈಗ ಅಂಜಲಿ ಕುಟುಂಬಕ್ಕೂ ಸಹಾಯವಾಗಿದ್ದು, ಎಷ್ಟು ಹಣ ನೀಡಲಾಗಿದೆ ಎಂಬ ವಿಷಯ ರಹಸ್ಯವಾಗಿದೆ.
ಈ ಮಧ್ಯೆ, ಶಾರುಖ್ ಖಾನ್ ಅಭಿನಯದ 'ಪಠಾಣ್' ಚಿತ್ರವು ಇದೇ ಜ.25ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ.