ಸಿನಿವಾಣಿ

ಸಿನಿಮಾ ರಿಲೀಸ್​ ಮಾಡೋಕೆ ರೆಡಿಯಾಗಿ!; ಚಿತ್ರ ಪ್ರದರ್ಶನಕ್ಕೆ ಕೇಂದ್ರದಿಂದ ಸಿಕ್ತು ಗ್ರೀನ್​ ಸಿಗ್ನಲ್!?

ಕಳೆದ ಮೂರು ತಿಂಗಳಿಂದ ಲಾಕ್​ಡೌನ್​ ಹಿನ್ನೆಲೆಯಲ್ಲಿ ಚಿತ್ರಮಂದಿರಗಳು ಬಾಗಿಲನ್ನು ಮುಚ್ಚಲಾಗಿತ್ತು. ಇದೀಗ ಆ ಮುಚ್ಚಿದ ಬಾಗಿಲನ್ನು ತೆರೆಯುವ ಸಮಯ ಬಂದಿದೆ. ಇನ್ನೇಕೆ ತಡ, ಮುನ್ನೆಚ್ಚರಿಕಾ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ಬಿಡುಗಡೆ ಮಾಡಲು ರೆಡಿಯಾಗಿ..

ಹೌದು, ಸದ್ಯ ಭಾರತದಲ್ಲಿ ಲಾಕ್​ಡೌನ್​ ಬಹುತೇಕ ಸಡಿಲಗೊಂಡಿದೆ. ಎಲ್ಲ ಕೆಲಸಗಳಿಗೆ ಚಾಲನೆ ಸಿಕ್ಕಿದೆ. ದೇವಸ್ಥಾನ, ಮಾಲ್ ತೆರೆಯುವಿಕೆಗೆ ಅನುಮತಿ ಸಿಕ್ಕಿದೆ. ಆದರೆ, ಸಿನಿಮಾ ಪ್ರದರ್ಶನದ ಬಗ್ಗೆ ಮಾತ್ರ ಯಾವುದೇ ಅಪ್​ಡೇಟ್​ ಮಾಹಿತಿ ಲಭ್ಯವಾಗಿರಲಿಲ್ಲ. ಸ್ಥಳೀಯ ಸಿನಿಮಾ ಇಂಡಸ್ಟ್ರಿಯವರು ಆಯಾ ಸಿಎಂ ಜತೆಗೆ ಚರ್ಚೆ ನಡೆಸಿದ್ದರೂ, ಮುಂದೇನು ಎಂಬುದು ಅಸ್ಪಷ್ಟವಾಗಿತ್ತು. ಇದೀಗ ಕೇಂದ್ರ ಸರ್ಕಾರದಿಂದಲೇ ಚಿತ್ರಮಂದಿರ ಯಾವಾಗಿನಿಂದ ತೆರೆಯಲಿವೆ ಎಂಬುದನ್ನು ಇನ್ನು ಕೆಲವೇ ದಿನಗಳಲ್ಲಿ ಘೋಷಣೆ ಮಾಡಲಿದೆ.

ಹೌದು, ಕೆಲ ದಿನಗಳ ಹಿಂದಷ್ಟೇ ಕೇಂದ್ರದ ಸಚಿವರೊಬ್ಬರ ಸಮ್ಮುಖದಲ್ಲಿ ಬಾಲಿವುಡ್​ನ ಖ್ಯಾತ ಚಿತ್ರಪ್ರದರ್ಶಕರು ಭೇಟಿಯಾಗಿ ಚರ್ಚೆ ನಡೆಸಿದ್ದರು. ಈ ವೇಳೆ ಪ್ರದರ್ಶಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಚಿವರ ಗಮನಕ್ಕೆ ತಂದಿದ್ದರು. ಅದೆಲ್ಲವನ್ನು ಪರಿಗಣಿಸಿ, ಶೀಘ್ರದಲ್ಲಿಯೇ ಈ ಸಮಸ್ಯೆಯನ್ನು ಗೃಹ ಇಲಾಖೆ ಗಮನಕ್ಕೂ ತರುವುದಾಗಿ ಸಚಿವರು ತಿಳಿಸಿದ್ದಾರೆ. ಅಷ್ಟೇ ಅಲ್ಲ ಜುಲೈ 1ರಿಂದ ಚಿತ್ರಮಂದಿರಗಳು ಮತ್ತು ಮಲ್ಟಿಪ್ಲೆಕ್ಸ್​ಗಳು ಎಂದಿನಂತೆ ಶುರುವಾಗಲಿವೆ ಎಂಬ ಭರವಸೆಯನ್ನೂ ನೀಡಿದ್ದಾರೆ.

ಇದೇ ವೇಳೆ ಆರೋಗ್ಯಕರ ಅಂತರ ಮತ್ತು ಕೋವಿಡ್​ ಹರಡದಂತೆ ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವಂತೆಯೂ ಪ್ರದರ್ಶಕ ಮಂಡಳಿಗೆ ಆದೇಶಿಸಿದೆ. ಸದ್ಯ ಕೇಂದ್ರ ಸರ್ಕಾರದ ಈ ನಡೆಯಿಂದಾಗಿ ಚಿತ್ರಮಂದಿರ ಮಾಲೀಕರು ಮತ್ತು ಪ್ರದರ್ಶಕರು ಕೊಂಚ ನಿರಾಳರಾಗಿ ನಿಟ್ಟುಸಿರು ಬಿಟ್ಟಿದ್ದಾರೆ. (ಏಜೆನ್ಸೀಸ್​)