ಸಿನಿವಾಣಿ

ಹೊಸಬರ ಕರುಳುಬಳ್ಳಿಯ ಕಥೆ ... ಅದೇ '2nd ಲೈಫ್‌'!

chetannadiger

ಬೆಂಗಳೂರು: ಈ ಹಿಂದೆ 'ಅಕ್ಷತೆ', 'ಗೋಸಿ ಗ್ಯಾಂಗ್​' ಮತ್ತು 'ಕತ್ತಲೆಕಾಡು ಎಸ್ಟೇಟ್​' ಎಂಬ ಚಿತ್ರಗಳನ್ನು ನಿರ್ದೇಶಿಸಿದ್ದ ರಾಜು ದೇವಸಂದ್ರ, ಈಗ ಸದ್ದಿಲ್ಲದೆ ತಮ್ಮ ನಾಲ್ಕನೆಯ ಚಿತ್ರದೊಂದಿಗೆ ವಾಪಸ್ಸಾಗಿದ್ದಾರೆ. ಅದೇ 'ಸೆಕೆಂಡ್​ ಲೈಫ್​'. ಈಗಾಗಲೇ ಅವರು ಚಿತ್ರದ ಕೆಲಸ ಮುಗಿಸಿ, ಇತ್ತೀಚೆಗೆ ಟ್ರೇಲರ್​ ಸಹ ಬಿಡುಗಡೆ ಮಾಡಿದ್ದಾರೆ.

'ಸೆಕೆಂಡ್​ ಲೈಫ್​' ಚಿತ್ರದಲ್ಲಿ ಆದರ್ಶ್ ಗುಂಡುರಾಜ್ ನಾಯಕನಾಗಿ ನಟಿಸಿದ್ದರು. ಈ ಹಿಂದೆ 'ಸ್ವಾರ್ಥರತ್ನ' ಎಂಬ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ಆದರ್ಶ್​​ಗೆ ಇದು ಎರಡನೇ ಚಿತ್ರ. ಅವರಿಗೆ ನಾಯಕಿಯಾಗಿ ಸಿಂಧು ರಾವ್​ ಇದ್ದಾರೆ. ಶಿವಪ್ರದೀಪ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಇದೊಂದು ಕ್ರೈಮ್​ ಥ್ರಿಲ್ಲರ್​ ಚಿತ್ರವಾಗಿದ್ದು, ಜಯಣ್ಣ ಫಿಲಂಸ್ ಹಾಗೂ ಶುಕ್ರ ಫಿಲಂಸ್ ಜತೆಯಾಗಿ ಈ ಚಿತ್ರವನ್ನು ನಿರ್ಮಿಸಿದೆ.

ಈ ಕುರಿತು ಮಾತನಾಡುವ ನಿರ್ದೇಶಕ ರಾಜು ದೇವಸಂದ್ರ, 'ಇದು ನನ್ನ ನಾಲ್ಕನೇ ನಿರ್ದೇಶನದ ಚಿತ್ರ. ಥ್ರಿಲ್ಲರ್ ಕಥಾಹಂದರ ಹೊಂದಿದೆ ಈ ಚಿತ್ರ. ಮಂಜುಳ ರಮೇಶ್ ಅವರು ಕಥೆ, ಚಿತ್ರಕಥೆ ಬರೆದಿದ್ದಾರೆ. ನಾನು ನಿರ್ದೇಶನ ಮಾಡಿದ್ದೇನೆ. ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಚಿತ್ರ ಇದಾಗಿದೆ' ಎಂದರು.

ಇದೊಂದು ವಿಭಿನ್ನ ಕಥೆ ಇರುವ ಚಿತ್ರ ಎಂದೇ ಮಾತು ಪ್ರಾರಂಭಿಸುವ ಚಿತ್ರದ ನಾಯಕ ಆದರ್ಶ್​ ಗುಂಡುರಾಜ್​, 'ಮಗು ಹುಟ್ಟಿದ ಕೆಲವೆ ದಿನಗಳಲ್ಲಿ ಕರಳು ಬಳ್ಳಿ (ಹೊಕ್ಕಳ ಬಳ್ಳಿ) ಬೀಳುತ್ತದೆ. ಇದನ್ನು ಶೇಖರಿಸಿಡುವ ಕಾರ್ಯ ಈಗ ಭರದಿಂದ ಸಾಗಿದೆ. ಇದನ್ನು ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗೆ ಬಳಸಿಕೊಳ್ಳಲಾಗುತ್ತಿದೆ. ಅಂತಹ ಕಥಾವಸ್ತು ಆಧರಿಸಿ ನಮ್ಮ ಚಿತ್ರ ನಿರ್ಮಾಣವಾಗಿದೆ' ಎನ್ನುತ್ತಾರೆ.

ಈ ಚಿತ್ರವನ್ನು ಮೊದಲು ಪುನೀತ್​ ರಾಜಕುಮಾರ್​ ನಿರ್ಮಿಸಬೇಕಿತ್ತಂತೆ. 'ಹೊಸ ಪ್ರಯತ್ನಗಳಿಗೆ ಪ್ರೋತ್ಸಾಹ ನೀಡುವ ಪುನೀತ್ ರಾಜಕುಮಾರ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಬೇಕಿತ್ತು. ಈ ಸಲುವಾಗಿ ಚರ್ಚಿಸಲು ಅವರು ನಮಗೆ ಸ್ನೇಹಿತರೊಬ್ಬರ ಮೂಲಕ ಸಮಯವನ್ನು ನೀಡಿದ್ದರು. ಆದರೆ ವಿಧಿಬರಹವೇ ಬೇರೆಯಾಗಿತ್ತು. ಈಗ ನಮ್ಮ ಚಿತ್ರದ ಹಾಡು ಪಿ.ಆರ್.ಕೆ ಮೂಲಕವೇ ಬಿಡುಗಡೆಯಾಗಿರುವುದು ಖುಷಿಯ ವಿಚಾರ' ಎನ್ನುತ್ತಾರೆ ಆದರ್ಶ್​.

ನಾಯಕಿ ಸಿಂಧು ರಾವ್​ ಈ ಚಿತ್ರದಲ್ಲಿ ಅಂಧೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 'ನಿರ್ದೇಶಕರು ನನಗೆ ಕಥೆ ಬಗ್ಗೆ ಏನು ಹೇಳಿಲ್ಲ. ಪಾತ್ರದ ಕುರಿತು ಮಾತ್ರ ಹೇಳಿದ್ದಾರೆ' ಅಂತಷ್ಟೇ ಹೇಳುತ್ತಾರೆ ಸಿಂಧು ರಾವ್​.

'ಸೆಕೆಂಡ್​ ಲೈಫ್​' ಚಿತ್ರಕ್ಕೆ ಆರವ್​ ಕೌಶಿಕ್​ ಸಂಗೀತ ಮತ್ತು ರಮೇಶ್​ ಕೊಯಿರ ಅವರ ಛಾಯಾಗ್ರಹಣವಿದೆ.