ಸಿನಿವಾಣಿ

ಆಡಿಯೋ ಕ್ಷೇತ್ರಕ್ಕೆ ಕಾಲಿಟ್ಟ 'ರಾಮ ರಾಮಾ ರೇ' ಸತ್ಯ; 'ಇಬ್ಬನಿ' ಆಲ್ಬಂ ಬಿಡುಗಡೆ

chetannadiger

ಬೆಂಗಳೂರು: 'ರಾಮ ರಾಮಾ ರೇ' ನಿರ್ದೇಶಕ ಡಿ. ಸತ್ಯಪ್ರಕಾಶ್​ ಈಗ ಬರೀ ನಿರ್ದೇಶಕರಾಗಿ ಉಳಿದಿಲ್ಲ. ಸತ್ಯ ಪಿಕ್ಚರ್ಸ್​ ಮೂಲಕ ನಿರ್ಮಾಪಕರೂ ಆಗಿದ್ದಾರೆ. ವಿತರಕರಾಗಿಯೂ ಗುರುತಿಸಿಕೊಂಡಿದ್ದಾರೆ. ಈಗ ಅವರು ಸಂಗೀತ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ.

ಸತ್ಯ ಪಿಕ್ಚರ್ಸ್ ಯೂ ಟ್ಯೂಬ್ ಚ್ಯಾನೆಲ್ ಈಗಾಗಲೇ ಕಿರುಚಿತ್ರ ಸರಣಿಯ ಮೂಲಕ ಹೊಸಪ್ರಯೋಗಗಳಿಗೆ ಪ್ರೋತ್ಸಾಹವನ್ನು ನೀಡುತ್ತಾ ಬಂದಿದೆ. ಈ ನಿಟ್ಟಿನಲ್ಲಿ ಮತ್ತೊಂದು ಹೊಸ ಸೇರ್ಪಡೆ ‘ಇಬ್ಬನಿ’ ವಿಡಿಯೋ ಗೀತೆ. ಸತ್ಯ ಮತ್ತು ಮಯೂರ ಮೋಷನ್ ಪಿಕ್ಚರ್ಸ್ ಹಾಗೂ ಬಿಲ್ವ ಸ್ಟುಡಿಯೋಸ್ ಜಂಟಿಯಾಗಿ ಈ ಆಲ್ಬಂ ಗೀತೆಯನ್ನು ನಿರ್ಮಿಸಿದೆ.

ಈ ಕುರಿತು ಮಾತನಾಡಿರುವ ಸತ್ಯ, 'ಈಗಾಗಲೇ ಆಡಿಯೋ ಲೇಬಲಿಂಗ್ ಹಕ್ಕುಗಳನ್ನು ಪಡೆದಿದ್ದು, ಸತ್ಯ ಪಿಕ್ಚರ್ಸ್ ಮೂಲಕ ಮುಂದಿನ ದಿನಗಳಲ್ಲಿ ಇನ್ನಷ್ಟು ಮ್ಯೂಸಿಕ್ ವಿಡಿಯೋಗಳು ಹಾಗೂ ಚಲನಚಿತ್ರ ಗೀತೆಗಳ ಮೂಲಕ ಕೇಳುಗರನ್ನು ತಲುಪಲು ವೇದಿಕೆ ಸಿದ್ಧಪಡಿಸಲಾಗಿದೆ. ಹೊಸ ಪ್ರತಿಭೆಗಳಿಗೆ ಅವಕಾಶವನ್ನು ನೀಡುವ ಮೂಲಕ ಇನ್ನಷ್ಟು ಹಾಡುಗಳನ್ನು ನಿರ್ಮಿಸುವ ಉದ್ದೇಶವನ್ನು ಇಟ್ಟುಕೊಂಡಿದೆ' ಎಂದು ಹೇಳುತ್ತಾರೆ.

'ಇಬ್ಬನಿ' ಗೀತೆಯನ್ನು ಬರೆದವರು ದಯಾನಂದ ರಾಜಣ್ಣ. ಇನ್ನು ಈ ಆಲ್ಬಂ ನಿರ್ದೇಶಿಸಿದವರು ಪ್ರಶಾಂತ ಬಾಗೂರು . ಅಭಿ ಗೌಡ ಮತ್ತು ರಕ್ಷಾ ಜಾದವ್ ಕಾಣಿಸಿಕೊಂಡಿರುವ ಈ ವಿಡಿಯೋಗೆ ಅಂಜನ್ ಆರ್ ಮಾಲೂರ್ ಛಾಯಾಗ್ರಹಣ ಮಾಡಿದ್ದಾರೆ. ಇನ್ನು, ಅನುರಾಧಾ ಭಟ್​ ಮತ್ತು ಎಮಿಲ್​ ಈ ಗೀತೆಗೆ ಧ್ವನಿಯಾಗಿದ್ದಾರೆ.

'ಇಬ್ಬನಿ' ಹಾಡು ಇತ್ತೀಚೆಗೆ ಪ್ರೇಮಿಗಳ ದಿನದ ಅಂಗವಾಗಿ ಸತ್ಯ ಪಿಕ್ಚರ್ಸ್ ಯೂಟ್ಯೂಬ್ ಚ್ಯಾನೆಲ್​ನಲ್ಲಿ ಬಿಡುಗಡೆ ಮಾಡಲಾಗಿದೆ.