ಸಿನಿವಾಣಿ

ರೂಮಿನಲ್ಲಿ ನಯನತಾರಾ ಅವತಾರ ಕಂಡು ಮೈಮರೆತಿದ್ದೆ! ಶರತ್​ ಕುಮಾರ್​ ಓಪನ್​ ಟಾಕ್​

ಚೆನ್ನೈ: ಸಾರಥಿ ಸಿನಿಮಾದಲ್ಲಿ ದರ್ಶನ್​ ಮತ್ತು ರಾಜ್​ಕುಮಾರ್ ಚಿತ್ರದಲ್ಲಿ ಪುನೀತ್​ ರಾಜ್​ಕುಮಾರ್​ ತಂದೆಯ ಪಾತ್ರದಲ್ಲಿ ನಟಿಸಿ ಕನ್ನಡಿಗರಿಗೂ ಹತ್ತಿರವಾಗಿರುವ ನಟ ಶರತ್​ ಕುಮಾರ್​ 90ರ ದಶಕದಲ್ಲಿ ತಮಿಳು ಚಿತ್ರರಂಗದ ಸ್ಟಾರ್​ ನಟರಾಗಿದ್ದರು. ಇಂದಿಗೂ ಸಾಕಷ್ಟು ಬಿಜಿಯಾಗಿರುವ ಶರತ್​ ಕುಮಾರ್​, ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದಲ್ಲದೆ, ಆಲ್​ ಇಂಡಿಯಾ ಸಮಥುವ ಮಕ್ಕಳ್​ ಕಟ್ಚಿ ಪಕ್ಷದ ಸಂಸ್ಥಾಪಕರಾಗಿರುವ ಅವರು ರಾಜಕೀಯ ಕ್ಷೇತ್ರದಲ್ಲೂ ಬಿಜಿಯಾಗಿದ್ದಾರೆ.

ಶರತ್​ ಕುಮಾರ್​ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ನಯನತಾರಾ ಬಗ್ಗೆ ಮಾತನಾಡಿರುವ ವಿಡಿಯೋ ತುಣುಕು ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ನಯನತಾರಾ ಮೊದಲ ತಮಿಳು ಸಿನಿಮಾ ಹೆಸರು ಅಯ್ಯ. ಈ ಚಿತ್ರದ ನಾಯಕ ಶರತ್​ ಕುಮಾರ್​. ಮೊದಲ ದಿನದ ಶೂಟಿಂಗ್​ ಅನುಭವವನ್ನು ಮೆಲುಕು ಹಾಕಿದ್ದಾರೆ.

ಅಂದಿನ ನಯನತಾರಾ ಇಂದು ಲೇಡಿ ಸೂಪರ್​ಸ್ಟಾರ್​ ಆಗಿರುವುದು ನನಗೆ ತುಂಬಾ ಹೆಮ್ಮೆ ಇದೆ. ಮೊದಲ ದಿನದ ಶೂಟಿಂಗ್​ ಅನುಭವ ಮರೆಯುವಂತಿಲ್ಲ. ಅಯ್ಯ ಸಿನಿಮಾದ ಶೂಟಿಂಗ್​ ಹಳ್ಳಿಯೊಂದರಲ್ಲಿ ನಡೆಯುತ್ತಿತ್ತು. ಆ, ಚಿತ್ರದಲ್ಲಿ ನಯನಾ ಹಳ್ಳಿ ಹುಡುಗಿಯ ಪಾತ್ರ ಮಾಡುತ್ತಿದ್ದಳು. ಮೊದಲ ದಿನ ಶೂಟಿಂಗ್​ಗೆ ಮಾಡ್ರನ್​ ಡ್ರೆಸ್​ ಧರಿಸಿ ಬಂದಿದ್ದಳು.

ನಯನತಾರಾ ಅವತಾರ ನೋಡಿದ ನಿರ್ದೇಶಕ ಹರಿ, ತಕ್ಷಣ ಶಾಕ್​ ಆಗಿ ಆಕೆಯನ್ನು ರೂಮಿಗೆ ಕರೆದೊಯ್ಯಲು ಆಮೇಲೆ ಮಾತನಾಡೋಣ ಎಂದು ಸೂಚಿಸಿದರು. ನಾನು ಈ ಸಿನಿಮಾದಲ್ಲಿ ಹೇಗಿರಬೇಕೆಂದು ಯೋಚಿಸಿದ್ದೇನೆ. ಆದರೆ, ಹೇಗೆ ಬಂದಿದ್ದಾರೆ ನೋಡಿ ಎಂದು ಗಾಬರಿಗೊಂಡರು. ಹೀರೋಯಿನ್​ ಸರಿಯಾಗಿ ನೋಡಲು ಬಿಡಿ ಸರ್​ ಎನ್ನುತ್ತಾ ತಮಾಷೆ ಮಾಡಿದೆ.

ಇದಾದ ಬಳಿಕ ನಯನತಾರರನ್ನು ಸಂಪೂರ್ಣ ಬದಲಾಯಿಸಿ, ಹಳ್ಳಿ ಹುಡುಗಿಯ ಲುಕ್​ ಕೊಡಲಾಯಿತು. ರೂಮಿಗೆ ಹೋಗಿ ಆಕೆಯ ಲುಕ್​ ನೋಡಿದಾಗ ಒಂದು ಕ್ಷಣ ನಾನೇ ಮರೆತು ಹೋದೆ. ಅಷ್ಟು ಚೆನ್ನಾಗಿ ಕಾಣಿಸುತ್ತಿದ್ದರು. ಅಂದು ಅಪರಿಚಿತೆಯಾಗಿದ್ದ ನಯನಾ, ಇಂದು ಲೇಡಿ ಸೂಪರ್​ಸ್ಟಾರ್​ ಆಗಿದ್ದಾರೆ. ಅವರ ಪ್ರಯಾಣ ನೋಡಿದರೆ ಸ್ಫೂರ್ತಿದಾಯಕವಾಗಿದೆ ಎಂದು ಶರತ್​ಕುಮಾರ್​ ಹೇಳಿದರು. (ಏಜೆನ್ಸೀಸ್​)