ಸಿನಿವಾಣಿ

ಜೋಗಪ್ಪನನ್ನು ಹುಡುಕಿ ಹೊರಟ ಸಂಜನಾ ದಾಸ್​ …

ಬೆಂಗಳೂರು: ಕಿರುತೆರೆಯಲ್ಲಿ ಹಲವು ಧಾರಾವಾಹಿಗಳನ್ನು ನಿರ್ದೇಶಿಸಿರುವ ಹಯವದನ, ಈಗ 'ಎಲ್ಲೋ ಜೋಗಪ್ಪ ನಿನ್ನರಮನೆ' ಎಂಬ ಚಿತ್ರ ನಿರ್ದೇಶಿಸುತ್ತಿದ್ದಾರೆ. 'ಕಂಬ್ಳಿಹುಳ' ಖ್ಯಾತಿಯ ಅಂಜನ್​ ನಾಗೇಂದ್ರ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಇನ್ನೊಬ್ಬ ನಾಯಕಿಯ ಆಯ್ಕೆ ಆಗಿದೆ.

'ಎಲ್ಲೋ ಜೋಗಪ್ಪ ನಿನ್ನರಮನೆ' ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ವೆನ್ಯ ರೈ ಎಂಬ ನಟಿ ಈಗಾಗಲೇ ಚಿತ್ರತಂಡಕ್ಕೆ ಸೇರ್ಪಡೆಯಾಗಿ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ಈಗ ಚಿತ್ರದ ಇನ್ನೊಬ್ಬ ನಾಯಕಿಯಾಗಿ ಸಂಜನಾ ದಾಸ್​ ಆಯ್ಕೆಯಾಗಿದ್ದಾರೆ. ಕನ್ನಡದಲ್ಲಿ ‘ಕೆಟಿಎಂ’, ‘ಮೂನ್ ವಾಕ್’ ಹಾಗೂ ಮಲಯಾಳಂನಲ್ಲಿ ‘ಮನಸ್ಮಿತ’ ಸಿನಿಮಾಗಳಲ್ಲಿ ನಟಿಸಿರುವ ಸಂಜನಾ ದಾಸ್ ಈಗ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

‘ಎಲ್ಲೋ ಜೋಗಪ್ಪ ನಿನ್ನರಮನೆ’ ಸಿನಿಮಾ ತಂಡ ಸದ್ಯ ಮಹಾರಾಷ್ಟ್ರದಲ್ಲಿ ಎರಡನೇ ಹಂತದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದೆ. ಇದೊಂದು ತಂದೆ-ಮಗನ ಬಾಂದವ್ಯದ ಕಥೆಯಾಗಿದ್ದು, ಜತೆಗೆ ಕಾಮಿಡಿ, ಪ್ರೀತಿ ಎಲ್ಲವೂ ಇದೆ.

'ಎಲ್ಲೋ ಜೋಗಪ್ಪ ನಿನ್ನರಮನೆ' ಚಿತ್ರದಲ್ಲಿ ಶರತ್ ಲೋಹಿತಾಶ್ವ, ಸ್ವಾತಿ, ದಾನಪ್ಪ, ಲಕ್ಷ್ಮೀ ನಾಡಗೌಡ, ದಿನೇಶ್ ಮಂಗಳೂರು, ಬಿರಾದರ್ ಮುಂತಾದವರು ನಟಿಸಿದ್ದಾರೆ. ಪೆಂಡೋರಾಸ್ ಬಾಕ್ಸ್ ಪ್ರೊಡಕ್ಷನ್ ಹಾಗೂ ಕೃಷ್ಣಛಾಯ ಚಿತ್ರ ಬ್ಯಾನರ್​ನಡಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಶಿವಪ್ರಸಾದ್​ ಛಾಯಾಗ್ರಹಣ ಮತ್ತು ನಟರಾಜ್​ ಮದ್ದಾಲ ಛಾಯಾಗ್ರಹಣವಿದೆ.