ಸಿನಿವಾಣಿ

ನನ್ನನ್ನು ಕಂಟ್ರೋಲ್​​ ಮಾಡ್ತಿದ್ದ, ತುಂಡುಡುಗೆ ಧರಿಸಲು ಬಿಡ್ತಿರ್ಲಿಲ್ಲ! ಸಲ್ಲು ಬಗ್ಗೆ ಸಂಗೀತಾ ಶಾಕಿಂಗ್ ಹೇಳಿಕೆ | Salman Khan

Salman Khan : ಬಾಲಿವುಡ್​​ ಸುಲ್ತಾನ್​ ಸಲ್ಮಾನ್​ ಖಾನ್ ಜತೆ ಸುಮಾರು ಒಂದು ದಶಕಗಳ ಕಾಲ ಡೇಟಿಂಗ್​ ಮಾಡಿದ್ದ ನಟಿ ಸಂಗೀತಾ ಬಿಜಲಾನಿ, ಆ ಸಮಯದಲ್ಲಿ ತಾವು ಅನುಭವಿಸಿದ ಕಹಿ ಘಟನೆಯನ್ನು ಬಿಚ್ಚಿಟ್ಟಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಸಲ್ಮಾನ್​ ಖಾನ್ ಇಂಥಾ ವ್ಯಕ್ತಿನಾ? ಎಂದು ನೆಟ್ಟಿಗರು ಹುಬ್ಬೇರಿಸುತ್ತಿದ್ದಾರೆ. ಇನ್ನು ಕೆಲ ನೆಟ್ಟಿಗರು ಸಲ್ಲು ಭಾಯ್​ ವಿರುದ್ಧ ಕಿಡಿಕಾರುತ್ತಿದ್ದಾರೆ.

ಟಿವಿ ಜಾಹೀರಾತಿನ ಶೂಟಿಂಗ್​ ಸೆಟ್​ನಲ್ಲಿ ಸಲ್ಲು ಮತ್ತು ಸಂಗೀತಾಗೆ ಮೊದಲು ಪರಿಚಯ ಆಯಿತು. ಇದೇ ಪರಿಚಯ ಪ್ರೀತಿಗೆ ತಿರುಗಿ ಇಬ್ಬರು ಡೇಟಿಂಗ್​ ಮಾಡಲು ಆರಂಭಿಸಿದರು. ಸುಮಾರು 10 ವರ್ಷಗಳ ಕಾಲ ಡೇಟಿಂಗ್​ ಮಾಡಿದರು. ಸುದೀರ್ಘ ಸಂಬಂಧದ ಬಳಿಕ ಮದುವೆಯಾಗಲೂ ಸಹ ನಿರ್ಧಾರ ಮಾಡಿದ್ದರು. ದಿನಾಂಕವೂ ನಿಗದಿಯಾಗಿ, ಅತಿಥಿಗಳನ್ನು ಆಹ್ವಾನಿಸುವ ಹಂತಕ್ಕೂ ಹೋಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಸ್ಫೋಟಕ ಟ್ವಿಸ್ಟ್​ ಕೊಟ್ಟ ಸಲ್ಲು ಭಾಯ್​, ಮದುವೆಯನ್ನು ರದ್ದು ಮಾಡಿದರು. ಈ ಘಟನೆ ನಡೆದ ಸುಮಾರು ವರ್ಷಗಳ ಬಳಿಕ ಸಂಗೀತಾ ಅವರು ಅಪರೂಪವೆಂಬಂತೆ ತಮ್ಮ ಸಂಬಂಧದ ಬಗ್ಗೆ ಮಾತನಾಡಿದ್ದಾರೆ.

ಸಂಗೀತಾ ಅವರು ಇಂಡಿಯನ್ ಐಡಲ್‌ ರಿಯಾಲಿಟಿ ಶೋನ ಇತ್ತೀಚಿನ ಸಂಚಿಕೆಗಳಲ್ಲಿ ವಿಶೇಷ ಅತಿಥಿಯಾಗಿ ಕಾಣಿಸಿಕೊಂಡರು. ಈ ವೇಳೆ ನಿಮ್ಮ ಜೀವನದಲ್ಲಿ ಬದಲಾಯಿಸಲು ಬಯಸುವ ಒಂದು ವಿಷಯದ ಬಗ್ಗೆ ತಿಳಿಸಿರಿ ಎಂದು ಕೇಳಲಾಯಿತು. ಈ ವೇಳೆ ಸಲ್ಮಾನ್ ಖಾನ್ ಅವರನ್ನು ಅನುಕರಿಸಿದ ಸಂಗೀತಾ, ನಾನಿಲ್ಲಿ ನನ್ನ ಮಾಜಿ ಗೆಳೆಯನ ಹೆಸರನ್ನು ತೆಗೆದುಕೊಳ್ಳುವುದಿಲ್ಲ. ನಾನು ತುಂಬಾ ನಿಯಂತ್ರಣಕ್ಕೆ ಒಳಗಾಗಿದ್ದೆ. ಎಲ್ಲ ವಿಚಾರದಲ್ಲೂ ಆತ ನನ್ನನ್ನು ನಿಯಂತ್ರಿಸುತ್ತಿದ್ದ ಎಂದರು.

ನಾನು ಯಾವುದೇ ತುಂಡುಡುಗೆಗಳನ್ನು ಧರಿಸುವಂತಿರಲಿಲ್ಲ. ಅದೇ ರೀತಿ ಎದೆ ಸೀಳು ಕಾಣುವಂತಹ ಬಟ್ಟೆಗಳನ್ನು ಹಾಕುವಂತಿರಲಿಲ್ಲ. ಆರಂಭದಲ್ಲಿ ನಾನು ಎಲ್ಲವನ್ನು ಮಾಡಿದೆ. ಆದರೆ, ಅಂತಿಮವಾಗಿ ನನಗೆ ಯಾವುದೇ ಅವಕಾಶವೂ ಸಿಗಲಿಲ್ಲ. ಆ ನಡೆಯಿಂದ ಆಗ ನನಗೆ ಸ್ವಲ್ಪ ನಾಚಿಕೆಯಾಯಿತು. ಕೊನೆಗೆ ನಾನು ಯಾವುದಕ್ಕೂ ಹೆದರಲಿಲ್ಲ. ಹೀಗಾಗಿ ನನ್ನ ಜೀವನದ ಆ ಭಾಗವನ್ನು ಬದಲಾಯಿಸಲು ನಾನು ಬಯಸುತ್ತೇನೆ. ಆದರೆ, ಈಗಾಗಲೇ ನಾನು ಬದಲಾಯಿಸಿದ್ದೇನೆ ಎಂದು ಸಂಗೀತಾ ಹೇಳಿದರು.

ಸಂಗೀತಾ ಅವರ ಮಾತುಗಳನ್ನು ಕೇಳಿದ ತಕ್ಷಣ ಇಂಡಿಯನ್​ ಐಡಲ್​ ಸ್ಪರ್ಧಿಗಳಲ್ಲಿ ಒಬ್ಬರಾದ ಮಾನಸಿ ಘೋಷ್, ಸಂಗೀತಾ ಅವರಿಗೆ ಮತ್ತೊಂದು ಪ್ರಶ್ನೆಯನ್ನು ಕೇಳಿದರು. ಸಲ್ಮಾನ್ ಮತ್ತು ನಿಮ್ಮ ಮದುವೆ ಕಾರ್ಡ್‌ಗಳನ್ನು ಮುದ್ರಿಸಲಾಗಿತ್ತು ಎಂದು ನಾವು ಕೇಳಿದ್ದೇವೆ. ಅದು ನಿಜವೇ? ಎಂದರು. ಈ ಪ್ರಶ್ನೆಗೆ ಗಾಬರಿಯಾದ ಸಂಗೀತಾ, ಹೌದು ನಿಜ. ಆದರೆ, ಈ ವಿಚಾರವಾಗಿ ನನ್ನ ಬಳಿ ಹೆಚ್ಚು ಕೇಳಬೇಡ ಎಂದರು. ಇತ್ತ ಕುತೂಹಲದಿಂದ ವಿಶಾಲ್ ದಾದ್ಲಾನಿ ಅವರು ಸಂಗೀತಾ ಕಡೆಗೆ ತಿರುಗಿ, "ಏನು ಕಥೆ?" ಎಂದು ಕೇಳಿದರು. ಈ ವೇಳೆ ಆದಿತ್ಯ ಬೇಗ ಟಾಪಿಕ್ ಬದಲಾಯಿಸಿ, ವಿಶು ಸರ್ ಇದನ್ನು ಭಾವನಾ ಬಳಿ ಮಾತನಾಡೋಣ ಎಂದರು. ಹೌದು, ನಾನು ಭಾವನಾದಲ್ಲಿ ಈ ಕಥೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ ಎಂದು ಸಂಗೀತಾ ಹೇಳಿದರು. ಅಂದಹಾಗೆ ಭಾವನಾ ಎಂಬುದು ಮುಂಬೈನ ಪರೇಲ್‌ನಲ್ಲಿರುವ ಅಪಾರ್ಟ್‌ಮೆಂಟ್ ಸಂಕೀರ್ಣವಾಗಿದ್ದು, ಸಂಗೀತಾ ಮತ್ತು ವಿಶಾಲ್ ದಾದ್ಲಾನಿ ಅಲ್ಲಿಯೇ ವಾಸವಿದ್ದಾರೆ.

ಈ ಹಿಂದೆ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ ಸಲ್ಮಾನ್ ಖಾನ್ ಅವರು ಸಂಗೀತಾ ಬಿಜಲಾನಿ ಜತೆ ಬಹುತೇಕ ಮದುವೆಯ ಹಂತಕ್ಕೆ ಹೋಗಿ ಕೊನೆಗೆ ಮದುವೆ ಮುರಿದುಬಿದ್ದ ವಿಚಾರವನ್ನು ತಿಳಿಸಿದರು. ಇದೇ ಸಂದರ್ಭದಲ್ಲಿ ಸಂಗೀತಾ ಏನಾದರೂ ಮಾಡಿದ್ರಾ ಎಂದು ಕರಣ್​ ಅವರು ತಮಾಷೆಯಾಗಿ ಕೇಳಿದಾಗ. ಸಲ್ಮಾನ್ ಖಾನ್ ನಗುತ್ತಾ ಅಂತಹ ಯಾವುದೇ ಘಟನೆ ನಡೆಯಲಿಲ್ಲ ಎಂದರು. (ಏಜೆನ್ಸೀಸ್​)